ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕುವುದು ಸೂಕ್ತವಲ್ಲ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ. ಜೊತೆಗೆ ಇದು ದ್ವೇಷದ ರಾಜಕಾರಣವಾಗುತ್ತದೆ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ. ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣ ಎಂದು ಹೆಸರಿಡಬೇಕು ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ರಸ್ತೆ, ಕ್ರೀಡಾಂಗಣ, ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಬೆಂಗಳೂರಿನ ಮೇಲು ಸೇತುವೆಗೆ ದೀನದಯಾಳ್ ಉಪಾಧ್ಯಾಯ, ನಗರ ಸಾರಿಗೆಗೆ ವಾಜಪೇಯಿ, ಗುಜರಾತ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಅರುಣ್ ಜೇಟ್ಲಿ ಅವರ ಹೆಸರು ಏಕೆ ಇಡಲಾಗಿದೆ? ಬದಲಿಸುವುದಾದರೆ ಈ ಹೆಸರುಗಳನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಲಿ ಎಂದು ಅವರು ಹೇಳಿದರು.
ಬಡವರು, ದಲಿತರ ಕಾಳಜಿ ಇಲ್ಲ:
ತಮ್ಮ ನಿವಾಸದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದದರಾಮಯ್ಯ, ಮೇಜರ್ ಧ್ಯಾನ್‍ಚಂದ್ ಅವರು ಶ್ರೇಷ್ಠ ಹಾಕಿ ಪಟು ಎಂಬುದರಲ್ಲಿ ಎರಡು ಮಾತಿಲ್ಲ. ಬೇರೆ ಪ್ರಶಸ್ತಿಗೆ ಅವರ ಹೆಸರು ಇಡಬಹುದಾಗಿತ್ತು.
ರಾಜೀವ್‍ಗಾಂಧಿಯವರ ಹೆಸರೇಕೆ ಬದಲಿಸಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಿದವರ ನೆನಪಿಗೆ ರಾಷ್ಟ್ರೀಯ ನಾಯಕರುಗಳ ಹೆಸರುಗಳನ್ನು ನಾಮಕರಣ ಮಾಡಲಾಗುತ್ತದೆ. ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಈ ಮೊದಲು ಅಧಿಕಾರದಲ್ಲಿದ ಪಕ್ಷದವರು ನಾಮಕರಣ ಮಾಡಿದ ಹೆಸರು ಬದಲಾವಣೆ ಮಾಡುವುದು ದ್ವೇಷದ ರಾಜಕಾರಣ.
ಇಂದಿರಾ ಗಾಂಧಿಯವರು ಬಡವರ ಪರ ಶ್ರಮಿಸಿದ್ದರು. ಗರೀಬಿ ಹಠಾವೋ ಎಂದವರು. ಜೊತೆಗೆ ಉಳುವವನೇ ಭೂಮಿ ಒಡೆಯ ಕಾನೂನು ಜಾರಿಗೆ ತಂದವರು. ಹೀಗಾಗಿ ಇಂದಿರಾ ಕ್ಯಾಂಟೀನ್‍ಗೆ ಅವರ ಹೆಸರು ಇಡಲಾಗಿದೆ.
ಬಿಜೆಪಿಗೆ ಬಡವರ ಬಗ್ಗೆಯೇ ಕಾಳಜಿ ಇಲ್ಲ. ಇದ್ದಿದ್ದರೆ ಬಡವರಿಗೆ ಕೊಡುತ್ತಿದ್ದ ಏಳು ಕೆ.ಜಿ. ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿದ್ದೇಕೆ? ಅವರಿಗೆ ದಲಿತರು, ಬಡವರು, ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಇದೆಯೇ? ಬಿಜೆಪಿಯವರು ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳ ಪರ ಇರುವವರು. ಸಿ.ಟಿ. ರವಿ ಬಿಜೆಪಿ ಪ್ರಧಾನ ಕಾರ್ಯದರ್ಶಿ. ಅವರು ಹೇಳಿದ್ದೇ ತೀರ್ಮಾನವಲ್ಲ. ಸರ್ಕಾರದ ನಿರ್ಧಾರ ಏನು ಎಂಬುದನ್ನು ನೋಡೋಣ ಎಂದರು.
ಸಚಿವ ಸಂಪುಟದ ಬಗ್ಗೆ ನಿರೀಕ್ಷೆಗಳಿಲ್ಲ:
ಹೊಸ ಸಚಿವ ಸಂಪುಟದ ಬಗ್ಗೆ ಯಾವ ಆಶಾ ಭಾವನೆಯೂ ಇಲ್ಲ. ಬಹುತೇಕ ಹಳಬರೇ ಸಂಪುಟದಲ್ಲಿದ್ದಾರೆ. ಹೀಗಾಗಿ ಹೊಸದನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಮಂತ್ರಿ ಮಂಡಲದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ. ಹಳೆಯ ಮೈಸೂರು ಭಾಗಕ್ಕೆ ಅವಕಾಶ ಕಡಿಮೆಯಾಗಿದೆ.
ರಾಜ್ಯದಲ್ಲಿ ಶೇ. 24.1ರಷ್ಟು ದಲಿತರಿದ್ದಾರೆ. ಆದರೆ, ಪರಿಶಿಷ್ಟರಿಗೆ ನಾಲ್ಕು ಸ್ಥಾನ ಮಾತ್ರ ನೀಡಲಾಗಿದೆ. ಭೋವಿಗಳಿಗೆ, ಕೊರಚ, ಕೊರಮರಿಗೆ ಅವಕಾಶ ಕೊಟ್ಟಿಲ್ಲ. ನಾವಿದ್ದಾಗ ಪ್ರಮಖ ಖಾತೆಗಳನ್ನು ಆ ಸಮುದಾಯದವರಿಗೆ ನೀಡಲಾಗಿತ್ತು. ಒಟ್ಟಾರೆ ಸಂಪುಟದಲ್ಲಿ ಪ್ರಾದೇಶಿಕ ಸಮತೋಲನ ಹಾಗೂ ಸಾಮಾಜಿಕ ನ್ಯಾಯಕ್ಕೆ ಅವಕಾಶವೇ ಇಲ್ಲ ಎಂದಿದ್ದಾರೆ.
ಇಡಿ ದಾಳಿ ಹಿಂದೆ ರಾಜಕೀಯ ದುರುದ್ದೇಶ:
ಸಾಮಾನ್ಯವಾಗಿ ಐಟಿ ದಾಳಿಯಾದ ಬಳಿಕ ಅವರ ಶಿಫಾರಸಿನ ಪ್ರಕಾರ ’ಇಡಿ’ ಅವರು ದಾಳಿ ಮಾಡುತ್ತಾರೆ. ಅದು ಆದಾಯ ಮೀರಿ ಆಸ್ತಿ ಗಳಿಸಿದ್ದರೆ, ಅಕ್ರಮವಾಗಿ ಹಣ ವರ್ಗಾವಣೆ ಅಥವಾ ದುರುಪಯೋಗವಾಗಿದ್ದರೆ ಮಾತ್ರ. ಆದರೆ, ಜಮೀರ್ ಅಹಮದ್ ಅವರ ಮನೆಯ ಮೇಲೆ ಇಡಿಯವರು ಏಕಾಏಕಿ ದಾಳಿ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತರ ಹಾಗೂ ಇದರ ಹಿಂದೆ ದುರುದ್ದೇಶ ಅಡಗಿದೆ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮೀರ್ ಅಹಮದ್ ಅವರು ಮನೆ ಕಟ್ಟಿದ್ದಾರೆ ಅಷ್ಟೆ. ಹಣ ದುರುಪಯೋಗ ಅಥವಾ ಅಕ್ರಮ ವರ್ಗಾವಣೆ ಎಲ್ಲಿ ಆಗಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರ ಮೇಲೆ ಏಕೆ ದಾಳಿ ನಡೆಯುವುದಿಲ್ಲ. ಅವರೆಲ್ಲ ಬಡವರೇ, ಬಿಪಿಎಲ್ ಕಾರ್ಡುದಾರರೇ ? ಕಾಂಗ್ರೆಸ್ಸಿಗರನ್ನೇ ಟಾರ್ಗೆಟ್ ಮಾಡುವುದೇಕೆ ? ಜಮೀರ್ ಅಹಮದ್ ಅವರು ನನ್ನ ಆಪ್ತರು. ಅದೇ ರೀತಿ ಹಲವಾರು ಮಂದಿ ನನಗೆ ಆಪ್ತರಿದ್ದಾರೆ. ಬಿಜೆಪಿಯಲ್ಲಿಯೂ ಇದ್ದಾರೆ. ಆದರೆ, ಸ್ನೇಹ ಬೇರೆ, ರಾಜಕೀಯ ಬೇರೆ ಎಂದು ಹೇಳಿದ್ದಾರೆ.
ಮುಖಂಡರ ಭೇಟಿ:
ರಾಜ್ಯಸಭೆ ಸದಸ್ಯ ಡಾ. ಎಲ್. ಹನುಮಂತಯ್ಯ, ಮಾಜಿ ಸಚಿವರಾದ ಎಚ್. ಆಂಜನೇಯ ಹಾಗೂ ಆರ್.ಬಿ. ತಿಮ್ಮಾಪುರ ಅವರು ಇಂದು ಸಿದ್ದರಾಮಯ್ಯ ಅವರನ್ನು ಅವರ ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.