ಬೆಂಗಳೂರು: ಕರ್ನಾಟಕ ರತ್ನ ದಿ.ಪುನೀತ್ ರಾಜ್ಕುಮಾರ್ ಹೆಸರಲ್ಲಿ ಈ ಬಾರಿಯ ಫ್ಲವರ್ ಶೋ ಮಾಡಲಾಗುವುದು. ಅಲ್ಲದೇ ಡಾ.ರಾಜ್ಕುಮಾರ್ ಅವರ ಗಾಜನೂರ ಮನೆಯನ್ನು ಹೂಗಳಿಂದ ಅಲಂಕಾರ ಮಾಡಲು ನಿರ್ಧರಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.
ವಿಕಾಸಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ಕೋವಿಡ್ ಕಾರಣದಿಂದ ಲಾಲ್ ಬಾಗ್ನಲ್ಲಿ ಫ್ಲವರ್ ಶೋ ಮಾಡಲು ಆಗಿರಲಿಲ್ಲ. ಆದರೆ ಈ ವರ್ಷ ಆ.5 ರಿಂದ ಫ್ಲವರ್ ಶೋ ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಆ.15 ವರೆಗೆ ಶೋ ನಡೆಯಲ್ಲಿದೆ. ಆದರೆ ಇನ್ನೂ 2 ದಿನ ಶೋ ವಿಸ್ತರಿಸಬೇಕು ಎನ್ನುವ ಚಿಂತನೆ ಇದೆ ಎಂದರು.
ವಿದೇಶಗಳಿಂದ ವಿಶೇಷ ಹೂ ಗಿಡಗಳನ್ನು ತರಿಸುತ್ತಿದ್ದೇವೆ. ದಿ. ಡಾ. ರಾಜ್ಕುಮಾರ್ ಮತ್ತು ದಿ. ಪುನೀತ್ ರಾಜ್ಕುಮಾರ್ ಅವರ ಪ್ರತಿಮೆಗಳಿಗೆ ಹೂಗಳಿಂದ ಅಲಂಕಾರ ಮಾಡುತ್ತಿದ್ದೇವೆ. ಕೋವಿಡ್ ಕಡಿಮೆಯಾಗಿರುವುದರಿಂದ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಫ್ಲವರ್ ಶೋ ಸಮಯದಲ್ಲಿ ಲಾಲ್ ಬಾಗ್ ಪ್ರವೇಶಕ್ಕೆ ಟಿಕೆಟ್ ದರ ಹೆಚ್ಚು ಮಾಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ, ವಿದೇಶಗಳಿಂದ ಹೂವಿನ ತಳಿಗಳನ್ನು ತರಿಸುತ್ತಿದ್ದೇವೆ. ಆದರೆ ಟಿಕೆಟ್ ದರ ಜಾಸ್ತಿ ಅಥವಾ ಕಡಿಮೆ ಮಾಡುವುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆಯಿಂದ ತೋಟಗಾರಿಕೆ ಬೆಳೆ ನಷ್ಟ ವಿಚಾರ ಕುರಿತು ಪ್ರತಿಕ್ರಿಯಿಸುತ್ತ, ಸಂಪೂರ್ಣ ವರದಿಯನ್ನು ಅಧಿಕಾರಿಗಳು ತರಿಸುತ್ತಿದ್ದಾರೆ. ವರದಿ ಬಳಿಕ ರೈತರಿಗೆ ಮಾಡಬೇಕಿರುವ ಸಹಾಯವನ್ನು ಖಂಡಿತವಾಗಿಯೂ ಮಾಡುತ್ತೇವೆ. ಏನೇನು ನಷ್ಟ ಉಂಟಾಗಿದೆಯೋ ಅದನ್ನು ಗಮನಿಸುತ್ತೇವೆ. ಪ್ರಾಮಾಣಿಕವಾಗಿ ನಾವು ರೈತರ ಜತೆ ಇದ್ದೇವೆ. ಪರಿಹಾರ ನೀಡಲಿದ್ದೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: 6 ತಿಂಗಳ ಹಿಂದೆಯೇ ನಿಗಮ ಮಂಡಳಿ ಅಧ್ಯಕ್ಷರ ರಾಜೀನಾಮೆಗೆ ಸೂಚನೆ ನೀಡಲಾಗಿದೆ: ಸಿಎಂ ಬೊಮ್ಮಾಯಿ