ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, 2022-23 ನೇ ಆಯವ್ಯಯದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಹಾಲಿನ ಪ್ರೋತ್ಸಾಹಧನ ಹೆಚ್ಚಳ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ಮಹತ್ವದ ಯೋಜನೆಗಳನ್ನು ಈ ಬಜೆಟ್ ನಲ್ಲಿ ಘೋಷಿಸಬಹುದೆಂಬ ನಿರೀಕ್ಷೆಯನ್ನು ರೈತರು ಇಟ್ಟುಕೊಂಡಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಟೊಮೇಟೊ ಬೆಳೆಯುವ ಜಿಲ್ಲೆಗಳ ಪೈಕಿ ಕೋಲಾರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದ್ದು, ಟೊಮೇಟೊ ಬೆಳೆಗಾರರಿಗೆ ಸುಸ್ಥಿರ ಮಾರುಕಟ್ಟೆ ಹಾಗೂ ಉತ್ತಮ ದರ ಒದಗಿಸಬೇಕಿದೆ. ಕೋಲಾರ ಜಿಲ್ಲೆ ಒಂದರಲ್ಲೇ ಸುಮಾರು 8,800 ಹೆಕ್ಟೇರ್ ಪ್ರದೇಶದಲ್ಲಿ ಟೊಮೇಟೊ ಬೆಳೆಯಲಾಗುತ್ತಿದ್ದು, ವಾರ್ಷಿಕ ಸುಮಾರು 200 ಕೋಟಿ ರೂ.ನಷ್ಟು ಟೊಮೇಟೊ ವಹಿವಾಟು ನಡೆಯುತ್ತದೆ. ಬೆಲೆ ಕುಸಿತ, ಕೀಟಬಾಧೆಯಿಂದ ತತ್ತರಿಸಿರುವ ಟೊಮೇಟೊ ಬೆಳೆಗಾರರ ಸಂಕಷ್ಟಕ್ಕೆ ಬಜೆಟ್‌ನಲ್ಲಿ ಪರಿಹಾರದ ಭರವಸೆ ಸಿಗುವ ನಿರೀಕ್ಷೆಯಿದೆ.
ಸಂಸ್ಕರಣಾ ಘಟಕಕ್ಕೆ ಒತ್ತಾಯ: ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಉತ್ಪಾದನೆಗೆ ಪ್ರಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಬೇಕು ಎಂಬುದು ಹಲವು ದಶಕಗಳ ಬೇಡಿಕೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಮಾವು ಕೋಲಾರ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ.
ಜಿಲ್ಲೆಯಲ್ಲಿ 49,425 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿತ್ತಿದ್ದು, ವಾರ್ಷಿಕ ಸರಾಸರಿ ಮಾವು ಉತ್ಪಾದನೆ ಪ್ರಮಾಣವು 4.22 ಲಕ್ಷ ಮೆಟ್ರಿಕ್ ಟನ್ ಇದೆ. ರಾಜ್ಯದ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ಜಿಲ್ಲೆಯ ಮಾವು ರಫ್ತಾಗುತ್ತದೆ. ಮಾವು ಸಂರಕ್ಷಣೆಗೆ ಶಿಥಲೀಕರಣ ಘಟಕ, ಮಾವು ಹಣ್ಣು ಮತ್ತು ಅದರ ಉಪ ಉತ್ಪನ್ನಗಳ ಸಂಸ್ಕರಣಾ ಘಟಕ ಆರಂಭಕ್ಕೆ ಬಜೆಟ್‌ನಲ್ಲಿ ಒತ್ತು ನೀಡಬೇಕೆಂಬ ಆಗ್ರಹವೂ ಇದೆ.
ಪ್ರೋತ್ಸಾಹಧನ ಹೆಚ್ಚಳ: ಹೈನುಗಾರಿಕೆಯೇ ಜೀವನಾಡಿಯಾಗಿರುವ ಜಿಲ್ಲೆಯಲ್ಲಿ ರೈತರು ಹಾಲಿನ ಪ್ರೋತ್ಸಾಹಧನ ಹೆಚ್ಚಳದ ನಿರೀಕ್ಷೆ ಇಟ್ಟುಕೊಂಡಿದ್ದಾಹೀಗಾಗಿ ರೈತರು ಕೃಷಿ ಬದಲಿಗೆ ಹೈನುಗಾರಿಕೆಯತ್ತ ಮುಖ ಮಾಡಿದ್ದು, ಹೈನುಗಾರಿಕೆಯು ರೈತ ಕುಟುಂಬಗಳ ಬೆನ್ನೆಲುಬಾಗಿದೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ಪ್ರಮುಖ ಆದಾಯ ಮೂಲವಾಗಿದೆ. ಹೈನೋದ್ಯಮಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಹಾಲಿನ ಪ್ರೋತ್ಸಾಹಧನ ಹೆಚ್ಚಿಸಬೇಕೆಂಬ ಕೂಗು ಬಲವಾಗಿ ಕೇಳಿ ಬಂದಿದೆ.
ಸರ್ಕಾರ ಸದ್ಯ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ. ಹಲವು ವರ್ಷಗಳಿಂದ ಪ್ರೋತ್ಸಾಹಧನ ಪರಿಷ್ಕರಿಸಿಲ್ಲ. 2019-20 ನೇ ಸಾಲಿನ ಹಣಕಾಸು ವರ್ಷದಲ್ಲಿ ಪ್ರೋತ್ಸಾಹಧನವನ್ನು 6 ರೂ. ಕ್ಕೆ ಹೆಚ್ಚಿಸಿದರೂ ಜಾರಿಯಾಗಲಿಲ್ಲ. ಪ್ರೋತ್ಸಾಹಧನ ಹೆಚ್ಚಿಸಬೇಕೆಂದು ಹಾಲು ಒಕ್ಕೂಟವು ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರ ಮನವಿಗೆ ಸ್ಪಂದಿಸಿ ಹಾಲಿನ ಪ್ರೋತ್ಸಾಹಧನ ಪರಿಷ್ಕರಿಸಬೇಕು ಎಂಬುದು ಹಾಲು ಉತ್ಪಾದಕರ ಒತ್ತಾಯವಾಗಿದೆ.
ಘೋಷಣೆಯಾಗಿದ್ದರೂ ಅನುಷ್ಠಾನ ಆಗಿಲ್ಲ: ಕಾಲುಸುಂಕ ನಿರ್ಮಿಸುವ ಗ್ರಾಮಬಂಧ ಸೇತುವೆ ಯೋಜನೆ, ಆಹಾರ ಪಾರ್ಕ್, ತೋಟಗಾರಿಕೆ ತಂತ್ರಜ್ಞಾನ ಪಾರ್ಕ್, ರೈತ ಉತ್ಪಾದಕರ ಸಂಸ್ಥೆಗಳು ಮಾರಾಟ ಮಾಡುವ ತೋಟಗಾರಿಕೆ ಉತ್ಪನ್ನಗಳಿಗೆ ಬ್ರಾಂಡ್ ವ್ಯಾಲ್ಯೂ ಕಲ್ಪಿಸುವ ಯೋಜನೆ, ಹೊಸ ಹೈಬ್ರಿಡ್ ಬೀಜ ನೀತಿ, ಬೆಂಗಳೂರಿನ ಓಕಳೀಪುರಂನಲ್ಲಿ ರೇಷ್ಮೆ ಇಲಾಖೆಯ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ತರಲು, 150 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಭವನ ನಿರ್ಮಾಣ. ಹೂವಿನ ಮಾರುಕಟ್ಟೆ, ಒಣ ಮೆಣಸಿನಕಾಯಿ ಮಾರುಕಟ್ಟೆ, ಬ್ಯಾಡಗಿಯಲ್ಲಿ ಆಧುನಿಕ ಗುಣ ವಿಶ್ಲೇಷಣಾ ಘಟಕ ಘೋಷಣೆ ಮಾಡಿದ್ದರೂ ಇನ್ನೂ ನಿರ್ಮಾಣವಾಗಿಲ್ಲ. ರೈತನು ವರ್ಷವಿಡೀ ವರಮಾನ ಪಡೆಯಲು ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮ ಅನುಷ್ಠಾನಗೊಂಡಿಲ್ಲ.
ಗೋ ಸಂಪತ್ತಿನ ರಕ್ಷಣೆಗಾಗಿ ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪನೆಯಾಗಿಲ್ಲ. ದೇಶೀಯ ಪಶುಸಂಪತ್ತಿನ ಶಾಶ್ವತ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ತರಬೇತಿ ನೀಡಲು ಹೆಸರಘಟ್ಟದಲ್ಲಿ ಥೀಮ್ ಪಾರ್ಕ್ ಸ್ಥಾಪನೆ ಆಗಬೇಕಿದೆ.
ಅನುಷ್ಠಾನ ಆಗಿದ್ದು: ದ್ರಾಕ್ಷಿ ಕೃಷಿಯ ಉತ್ತೇಜನಕ್ಕೆ ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ರಚಿಸಲು ಕ್ರಮ. ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್ ರಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಮನಗರದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ ಪ್ರಗತಿಯಲ್ಲಿದೆ.
ಇದನ್ನೂ ಓದಿ: ರಾಜ್ಯ ಬಜೆಟ್: ಅಂಗನವಾಡಿ, ಆಶಾ ಕಾರ್ಯಕರ್ತೆಯರ ನಿರೀಕ್ಷೆಗಳೇನು?