ಬೆಂಗಳೂರು: ಕೊರೊನಾ ಪರಿಸ್ಥಿತಿಯನ್ನು "ಸಾರ್ವಜನಿಕ ತುರ್ತು ಪರಿಸ್ಥಿತಿ" ಎಂದು ಪರಿಗಣಿಸಿ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸರ್ಕಾರ ತನ್ನ ಅಧಿಸೂಚನೆ ಹಿಂಪಡೆದುಕೊಳ್ಳದಿದ್ದರೆ ಅದಕ್ಕೆ ತಡೆಯಾಜ್ಞೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ದೀಪಾಂಜಲಿ ನಗರ ನಿವಾಸಿ ಎಚ್. ಮಾರುತಿ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ವಿವರಣೆ ನೀಡಿ, ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಲು ಕೈಗಾರಿಕೆಗಳ ಕಾಯ್ದೆ ಸೆಕ್ಷನ್ 5 ನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಸೆಕ್ಷನ್ 65(2) ರ ಅಡಿ ಸರಿಯಾದ ಅಧಿಸೂಚನೆ ಹೊರಡಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೊರೋನಾ ಪರಿಸ್ಥಿತಿಯನ್ನು "ಸಾರ್ವಜನಿಕ ತುರ್ತುಪರಿಸ್ಥಿತಿ" ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಅಧಿಸೂಚನೆಯನ್ನು ಹಿಂಪಡೆಯದಿದ್ದರೆ ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿ, ವಿಚಾರಣೆ ಮುಂದೂಡಿತು.