ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ನಿಯಂತ್ರಣ ಸಾಧ್ಯವಿಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ತಕ್ಕಂತೆ ದರ ನಿಗದಿಯಾಗುತ್ತಿರುವುದರಿಂದ ನಾವು ನಿಯಂತ್ರಣ ಮಾಡಲಯ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅಸಹಾಯತೆ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಅವರ ದಿನಬಳಕೆ ವಸ್ತುಗಳ ಬೆಲೆ ಎರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಕ್ರೇನ್ ಮತ್ತು ರಷ್ಯಾ ಯುದ್ಧ ನಡೆಯುತ್ತಿದೆ ಎನ್ನುವ ಕಾರಣಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿಲ್ಲ, ಖಾದ್ಯ ತೈಲ ಬೇಸಿಗೆ ಕಾಲದಲ್ಲಿ ಹೆಚ್ಚಾಗುವುದು ಸಹಜ. ಹಾಗಾಗಿ, ಪಾಮಾಯಿಲ್ ಹೆಚ್ಚುವರಿ ತರಿಸಲಾಗುತ್ತದೆ. ದರ ಹೆಚ್ಚು ಕಡಿಮೆ ಎಲ್ಲವೂ ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಅವಲಂಭಿಸಿದೆ ಎಂದರು.
ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಕಡಿತ ನನ್ನ ವ್ಯಾಪ್ತಿಗೆ ಬರಲ್ಲ, ಸಿಎಂನ ಕೇಳಬೇಕು. ಆದರೆ, ಖಾದ್ಯ ತೈಲ ಅಗತ್ಯ ದಾಸ್ತಾನು ಇದೆ. ಕಬ್ಬಿಣದ ಬೆಲೆ ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿಸಿದೆ. ಎಣ್ಣೆ, ಕಬ್ಬಿಣ ಎಲ್ಲ ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಭಿಸಿದೆ. ಪ್ರತಿ ಬಾರಿ ಬೇಸಿಗೆ ಕಾಲದಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚಳ ಆಗಲಿದೆ. ಇದಕ್ಕೆ ಯುದ್ದ ಕಾರಣವಲ್ಲ. ಹಾಗಾಗಿ, ನಮ್ಮಿಂದ ಮಾರುಕಟ್ಟೆ ನಿಯಂತ್ರಣ ಸಾಧ್ಯವಿಲ್ಲ, ಮಾರ್ಕೆಟ್ ಈಸ್ ಮಾರ್ಕೆಟ್ ಎಂದು ಅಗತ್ಯ ವಸ್ತು ಬೆಲೆ ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದು ಕೈಚಲ್ಲಿದರು.
ಜೂನ್ ಒಳಗೆ 8 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ : ರಾಜ್ಯದಲ್ಲಿ 8 ಲಕ್ಷ ಬಿಪಿಎಲ್ ಕಾರ್ಡ್‌ಗಳ ವಿತರಣೆ ಬಾಕಿ ಇದ್ದು, ಜೂನ್ ಅಂತ್ಯದ ಒಳಗೆ ಎಲ್ಲ ಅರ್ಜಿಗಳ ಪರಿಶೀಲನೆ ನಡೆಸಿ ಸಮೀಕ್ಷೆ ಪೂರ್ಣಗೊಳಿಸಿ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷದಲ್ಲಿ 15,53,745 ಅರ್ಜಿ ಬಿಪಿಎಲ್‌ಗೆ ಬಂದಿವೆ.
ಅದರಲ್ಲಿ 8,03,782 ಕಾರ್ಡ್ ನೀಡಲಾಗಿದೆ. ಮನೆ ಮನೆಗೆ ಹೋಗಿ ಸರ್ವೆ ಮಾಡಬೇಕು, ಕೋವಿಡ್ ಕಾರಣಕ್ಕೆ ಅದು ವಿಳಂಬ ಆಗಿದೆ. ಬಯೋಮೆಟ್ರಿಕ್ ಪಡೆಯಬೇಕಿದೆ, ಅದೂ ಕೂಡ ವಿಳಂಬಕ್ಕೆ ಕಾರಣವಾಗಿದೆ ಎಂದರು. ಬರುವ ದಿನದಲ್ಲಿ ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ವಾಪಸ್ ಪಡೆದು ಅರ್ಹರಿಗೆ ವಿತರಿಸಲು ಕ್ರಮವಹಿಸಲಾಗುತ್ತದೆ. 8 ಲಕ್ಷ ಅರ್ಜಿಯಲ್ಲಿ 4 ಲಕ್ಷ ಅರ್ಜಿಗಳು ಸಮೀಕ್ಷೆಯಾಗಿ ವಿತರಣೆ ಬಾಕಿ ಇದೆ. ಅದನ್ನು ಇನ್ನೊಂದು ತಿಂಗಳಿನಲ್ಲಿ ಕೊಡಲು ಕ್ರಮವಹಿಸಲಾಗುತ್ತದೆ. ಅದೇ ರೀತಿ ಜೂನ್‌ನೊಳಗಾಗಿ ಸಮೀಕ್ಷೆ ಆಗಬೇಕಿರುವ ನಾಲ್ಕು ಲಕ್ಷ ಕುಟುಂಬಗಳ ಸಮೀಕ್ಷೆ ಮಾಡಿ ಹಂಚಿಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಈಶ್ವರಪ್ಪ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಬಿ.ಕೆ ಹರಿಪ್ರಸಾದ್