ಬೆಂಗಳೂರು: ಸದೃಢ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳು ಸಹಕಾರಿ. ಎಲ್ಲರೂ ಒಂದಲ್ಲಾ ಒಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಅವರ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭ ಎಂದು ಮಾಜಿ ರಣಜಿ ಆಟಗಾರ, ಕೆಂಗಲ್ ಹನುಂತಯ್ಯ ಮೆಮೋರಿಯಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಹೇಳಿದರು.
ನಗರದ ಮಲ್ಲೇಶ್ವರಂ ಆಟದ ಮೈದಾನದಲ್ಲಿ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಮೊದಲ ಚುನಾಯಿತ ಮುಖ್ಯಮಂತ್ರಿ ಹಾಗೂ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ರಾಜ್ಯಕ್ಕೆ ಹಾಗೂ ದೇಶಕ್ಕೆ ನೀಡಿದ ಕೊಡುಗೆ ಅಪಾರ. ರಾಜ್ಯದ ನಿರ್ಮಾಣಕ್ಕೆ ಸುಸ್ಥಿರ ಅಡಿಪಾಯ ಹಾಕಿದವರು. ಅಲ್ಲದೆ, ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ತಮ್ಮದೇ ಅದ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಮಹನೀಯರ ಬಗ್ಗೆ ನಮ್ಮ ಯುವ ಜನಾಂಗದಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ “ಕೆಂಗಲ್ ಕಪ್” ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ನ್ನು ಆಯೋಜಿಸಿದ್ದೇವೆ ಎಂದರು.
ಫೆಬ್ರವರಿ 9 ಮತ್ತು 10 ರಂದು ಈ ಟೂರ್ನಮೆಂಟ್ ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆಯಲಿದೆ. ಟೂರ್ನಮೆಂಟ್ನಲ್ಲಿ ಪ್ರಥಮ ಬಹುಮಾನ ಗೆಲ್ಲುವ ತಂಡಕ್ಕೆ 1 ಲಕ್ಷ ರೂಪಾಯಿಗಳ ಬಹುಮಾನವನ್ನು ನಿಗದಿಗೊಳಿಸಲಾಗಿದೆ. 8 ಓವರ್ಗಳ ಈ ಕ್ರಿಕೆಟ್ ಟೂರ್ನಮೆಂಟ್ನಲ್ಲಿ 16 ತಂಡಗಳನ್ನು ಸೆಣೆಸಲಿವೆ ಎಂದರು.