ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಡಿಯೋ ಬಹಿರಂಗ, ಅಯೋಧ್ಯೆ ತೀರ್ಪು ಸೇರಿದಂತೆ ಉಪಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪಕ್ಷದ ವಕ್ತಾರರು ಯಾವ ರೀತಿ ಸಮರ್ಥಿಸಿಕೊಳ್ಳಬೇಕು ಎಂಬ ಕುರಿತು ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.
ಬಿಎಸ್ವೈ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ಕುಮಾರ್, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ಕುಮಾರ್ ಸುರಾನಾ ನೇತೃತ್ವದಲ್ಲಿ ವಕ್ತಾರರ ಸಭೆ ಜರುಗಿತು.
ವಿಡಿಯೋ ಬಗ್ಗೆ ಕಾಂಗ್ರೆಸ್ ಆರೋಪಗಳಿಗೆ ಕೌಂಟರ್ ಯಾವ ರೀತಿ ಕೊಡಬೇಕು ಎನ್ನುವುದರ ಬಗ್ಗೆ ಚರ್ಚಿಸಿದರು. ನಂತರ ಸದ್ಯದಲ್ಲೇ ಪ್ರಕಟವಾಗುವ ಅಯೋಧ್ಯೆ ಕುರಿತ ಸುಪ್ರೀಂಕೋರ್ಟ್ ತೀರ್ಪು ಬಳಿಕ ಪಕ್ಷದ ಅಭಿಪ್ರಾಯಗಳು ಏನಿರಬೇಕೆಂಬ ಎಂಬುದರ ಕುರಿತೂ ಚರ್ಚಿಸಿದರು.
ಉಪಚುನಾವಣೆಯಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುವ ವಿಷಯಗಳನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಪಕ್ಷದ ಪರವಾಗಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ಕುಮಾರ್ ಹಾಗೂ ಹಿರಿಯ ಮುಖಂಡ ರವೀಂದ್ರ ಅವರು ಸಮಗ್ರವಾಗಿ ತರಬೇತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.