ಬೆಂಗಳೂರು: ದಿನದಿಂದ ದಿನಕ್ಕೆ ನಗರ ಪ್ರದೇಶ ಅತೀ ವೇಗವಾಗಿ ಬೆಳೆಯುತ್ತಿದ್ದು, ನೀರಿನ ಸಮಸ್ಯೆ ಸಹ ಉಲ್ಬಣಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಇಲ್ಲೊಬ್ಬರು ಅಂತರ್ಜಾಲ ತಾಣಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಕುರಿತು ಮಾಹಿತಿ ಸಂಗ್ರಹಿಸಿ, ಮೂರು ವರ್ಷದಿಂದ ತಮ್ಮ ಮನೆಯಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.
ಹೌದು, ಬೆಂಗಳೂರು ಪೂರ್ವ ತಾಲೂಕಿನ ಕಿತ್ತಗನೂರು ಪಂಚಾಯಿತಿಯ ಬಾಬುರಾವ್ ಎಂಬ ವ್ಯಕ್ತಿ ಕಳೆದ ಮೂರು ವರ್ಷಗಳಿಂದ ಮನೆ ಮೇಲೆ ಬೀಳುವ ಮಳೆ ನೀರು ಪೋಲಾಗದಂತೆ ಶೇಖರಣೆ ಮಾಡಿ, ನಂತರ ವೈಜ್ಞಾನಿಕವಾಗಿ ಶುದ್ಧೀಕರಣ ಮಾಡಿ ಶುದ್ಧವಾದ ನೀರನ್ನು ಉಪಯೋಗಿಸುತ್ತಿದ್ದಾರೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಬಾಬುರಾವ್, 'ನಮ್ಮ ಮನೆಗೆ ಪ್ರತ್ಯೇಕವಾದ ಕೊಳವೆ ಬಾವಿ ಇತ್ತು. ಬಡಾವಣೆ ಬೆಳೆದಂತೆ ಅಕ್ಕ ಪಕ್ಕದಲ್ಲಿ ಹೆಚ್ಚಾಗಿ ಕೊಳವೆ ಬಾವಿಗಳನ್ನು ಕೊರೆದ ಹಿನ್ನೆಲೆ ನಮ್ಮ ಬಾವಿ ನೀರು ಬತ್ತಿ ಹೋಯಿತು. ತದನಂತರ ಟ್ಯಾಂಕರ್ ಮೂಲಕ ನೀರು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಯಿತು. ಮನೆ ಮೇಲೆ ಬಿದ್ದಂತಹ ನೀರು ಪೋಲಾಗುತ್ತಿದ್ದನ್ನು ಕಂಡು ಈ ನೀರನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂದು ಅಂತರ್ಜಾಲದ ಮೊರೆ ಹೋದಾಗ ಮಳೆ ನೀರು ಕೊಯ್ಲು ಪದ್ಧತಿ ಕುರಿತು ಮಾಹಿತಿ ದೊರೆಯಿತು. ಇದೀಗ ನಾವು ವರ್ಷದ ಆರು ತಿಂಗಳು ಮಳೆ ನೀರನ್ನೇ ಬಳಕೆ ಮಾಡುತ್ತಿದ್ದೇವೆ' ಎಂದರು.
ಗ್ರಾ.ಪಂ ಸದಸ್ಯ ರಮೇಶ್ ರೆಡ್ಡಿ ಮಾತನಾಡಿ 'ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡು ಎಲ್ಲರೂ ಜಲಮೂಲವನ್ನು ಸಂರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ನೂತನ ಮನೆ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕೆಂದು' ಮನವಿ ಮಾಡಿದರು.
ನಂತರ ಬೆಂಗಳೂರು ಪೂರ್ವ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸಹಾಯಧನ ನೀಡಲಾಗುವುದು. ಎಲ್ಲರೂ ನೂತವಾಗಿ ಮನೆ ನಿರ್ಮಿಸಿದರೆ ಮಳೆ ಕೊಯ್ಲು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.