ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಕೊರೊನಾ ಪ್ರೇರಿತ ಲಾಕ್ಡೌನ್ನಲ್ಲೂ ದುಡಿಯುವ ಕೈಗಳ ಕೈ ಹಿಡಿದಿದೆ. ಕೊಪ್ಪಳ, ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನರೇಗಾ ಯೋಜನೆಯಡಿ ಈ ವರ್ಷ ಸೃಜಿಸಿದ ಮಾನವ ದಿನಗಳೆಷ್ಟು? ಕೆಲಸ ಮಾಡಿದ ವಲಸೆ ಕಾರ್ಮಿಕರೆಷ್ಟು ಎಂಬುದರ ಕುರಿತ ಒಂದು ವರದಿ ಇಲ್ಲಿದೆ.
ಕೊರೊನಾ ಸೋಂಕಿನ ಭೀತಿಯ ಕರಿನೆರಳು ಎಲ್ಲ ಕ್ಷೇತ್ರಗಳ ಮೇಲೂ ಬೀರಿದ್ದು, ಸಾಮಾನ್ಯ ಜನರ ಬದುಕು ಮೂರಾಬಟ್ಟೆಯಾಗಿದೆ. ಕೋವಿಡ್ ಹಿನ್ನೆಲೆ ಕೆಲಸ ಕಳೆದುಕೊಂಡ ಕಾರ್ಮಿಕರು ನಗರ ಪ್ರದೇಶದಿಂದ ಹಳ್ಳಿಗಳಿಗೆ ವಲಸೆ ಬಂದಿದ್ದರು. ಕೆಲಸವಿಲ್ಲದೇ ಕೈಕಟ್ಟಿ ಕುಳಿತಿದ್ದ ಜನರಿಗೆ ಕೈ ತುಂಬಾ ಕೆಲಸ ಕೊಟ್ಟಿದ್ದು ಮಾತ್ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ.
ಬಾಗಲಕೋಟೆ ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ 42 ಲಕ್ಷ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಆದರೆ, ಈವರೆಗೂ 33.6 ಲಕ್ಷ ಉದ್ಯೋಗ ನೀಡಲಾಗಿದೆ. ಅಂದರೆ ವಾರ್ಷಿಕ ಸರಾಸರಿ ಶೇ.78.73 ರಷ್ಟಾಗಿದೆ. ಬಾಗಲಕೋಟೆ ಜಿಲ್ಲೆಗೆ ವಾರ್ಷಿಕ 204 ಕೋಟಿ ವೆಚ್ಚ ಮಾಡುವ ಗುರಿ ಇದೆ. ಇದರಲ್ಲಿ ಈಗ 116 ಕೋಟಿ ವೆಚ್ಚವಾಗಿದೆ. 2.13 ಲಕ್ಷ ಜನರಿಗೆ ಜಾಬ್ ಕಾರ್ಡ ನೀಡಲಾಗಿದೆ. ನಿತ್ಯ ಉದ್ಯೋಗ ನೀಡಿದವರ ಖಾತೆಗೆ ನೇರವಾಗಿ ಜಮಾ ಆಗುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲಿ 51 ಲಕ್ಷ ಮಾನವ ದಿನಗಳ ಸೃಷ್ಟಿಗೆ ಗುರಿ ನೀಡಲಾಗಿದೆ. ಅದರಂತೆ ಈಗಾಗಲೇ ಸುಮಾರು 41.60 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ನಮಗೆ ತುಂಬಾ ಅನುಕೂಲವಾಗಿದೆ. ಕೂಲಿ ಬರುವುದರಲ್ಲಿ ಮೊದಲು ತುಸು ವಿಳಂಬವಾಗುತ್ತಿತ್ತು. ಆದರೀಗ ಕೆಲಸ ಮಾಡಿದ ವಾರದೊಳಗೆ ಕೂಲಿ ಹಣ ನಮಗೆ ಸಿಗುತ್ತದೆ ಎನ್ನುತ್ತಾರೆ ಉದ್ಯೋಗಖಾತರಿ ಯೋಜನೆಯ ಕೂಲಿಕಾರರು. ಒಟ್ಟಿನಲ್ಲಿ ಅಲ್ಲೊಂದು ಇಲ್ಲೊಂದು ಕೂಲಿ ಹಣ ವಿಳಂಬ ಪ್ರಕರಣಗಳು ಕಂಡುಬಂದರೂ ಸಹ ಉದ್ಯೋಗ ಖಾತ್ರಿ ಯೋಜನೆ ಕೂಲಿಕಾರರಿಗೆ ಅನುಕೂಲವಾಗಿದೆ ಎಂದು ಹೇಳಬಹುದು.