ಬೆಂಗಳೂರು: ಶಾಹೀನ್ ಚಂಡಮಾರುತದ ಪ್ರಭಾವ ರಾಜಧಾನಿ ಬೆಂಗಳೂರಿಗೆ ತಟ್ಟಿದ್ದು, ಭಾನುವಾರ ಸಂಜೆಯಿಂದ ಭಾರಿ ಮಳೆಯಾಗುತ್ತಿದೆ. ಮುಂದಿನ ನಾಲ್ಕು ದಿನ ನಗರದಲ್ಲಿ ವರುಣನ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಿನ್ನೆ ತಡರಾತ್ರಿವರೆಗೂ ನಗರದ ಅನೇಕ ಭಾಗಗಳ ತಗ್ಗು ಪ್ರದೇಶಗಳಲ್ಲಿನ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಂಡರ್ ಪಾಸ್ಗಳಲ್ಲಿ ಬೈಕ್, ಕಾರು ಸೇರಿದಂತೆ ಅನೇಕ ವಾಹನಗಳು ಕೊಚ್ಚಿ ಹೋಗಿದ್ದರೆ, ಮರಗಳು ಧರೆಗುರುಳಿವೆ.
ಇದನ್ನೂ ಓದಿ: ಶಾಹೀನ್ ಚಂಡಮಾರುತ ಎಫೆಕ್ಟ್: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ, ಅವಾಂತರ
ಹೆಚ್.ಎ.ಎಲ್ ಬಳಿಯ ರಮೇಶ್ ನಗರದಲ್ಲಿ ಕಟ್ಟಡವೊಂದರ ಗೋಡೆ ಕುಸಿದಿದ್ದು, ಗೋಡೆ ಬದಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳು ಜಖಂ ಆಗಿವೆ. ಕೆ.ಆರ್.ಪುರ, ಮಹದೇವಪುರ, ಹೊಸಕೋಟೆ, ಜೆ ಸಿ ನಗರ, ರಾಮಮೂರ್ತಿನಗರ, ರಾಜರಾಜೇಶ್ವರಿ ನಗರ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ.