ಬೆಂಗಳೂರು : ಐಎಂಎ ವಂಚನೆ ಪ್ರಕರಣ ಆರೋಪಿ ಮನ್ಸೂರ್ ಖಾನ್‌ಗೆ ಆಸ್ತಿ ಮಾರಾಟ ಮಾಡಿದ ವಿಚಾರವಾಗಿ ಇಡಿ ಅಧಿಕಾರಿಗಳು ತಮಗೆ ನೀಡಿದ ನೋಟಿಸ್ಗೆ ಜುಲೈ 5 ರೊಳಗೆ ಉತ್ತರ ನೀಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿರುವ ಮನ್ಸೂರ್ ಖಾನ್‌ಗೆ ಆಸ್ತಿ ಮಾರಾಟ ಮಾಡಿರುವ ವಿಚಾರವಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿವರಣೆ ಕೇಳಿ ನೊಟೀಸ್ ನೀಡಿದ್ದಾರೆ.
ಸಮನ್ಸ್ ಜಾರಿ ಕುರಿತು ಪ್ರತಿಕ್ರಿಯಿಸಿದ ಜಮೀರ್, ಇಡಿ ಅಧಿಕಾರಿಗಳು ಇಂದು ಬೆಳಗ್ಗೆ ತಮ್ಮ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐಎಂಎ ಕಂಪನಿಗೆ ಆಸ್ತಿ ಮಾರಾಟ ಮಾಡಿದ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಜುಲೈ 5 ರ ವರೆಗೆ ಕಾಲಾವಕಾಶ ಕೊಟ್ಟಿದ್ದಾರೆ. ಐಎಂಎಗೆ ಆಸ್ತಿ ಮಾರಿದ ದಾಖಲೆಗಳು ನನ್ನ ಬಳಿ ಇವೆ. ಅವುಗಳನ್ನು ಸಕಾಲದಲ್ಲಿ ಇಡಿಗೆ ಒದಗಿಸಿ ತನಿಖೆಗೆ ಸಹಕರಿಸುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
2017 ರಲ್ಲಿ ಆಸ್ತಿ ಮಾರಿ, ಐಟಿ ಇಲಾಖೆಗೆ ತೆರಿಗೆ ಕಟ್ಟಿದ್ದೇನೆ. ಅಲ್ಲದೇ 2018 ರಲ್ಲಿ ಮಾರಾಟದ ಡಿಡಿಯನ್ನು ಮಾಡಿಕೊಟ್ಟಿದ್ದೇನೆ. ಮನ್ಸೂರ್ ಯಾಕೆ ಹೀಗೆ ಎಂದು ಗೊತ್ತಿದ್ದರೆ ನಾನು ಆ ವಿಚಾರವನ್ನು ಪರಿಗಣಿಸುತ್ತಿರಲಿಲ್ಲ. ಇಡಿ ನೀಡಿದ ನೋಟಿಸ್ ತೆಗೆದುಕೊಳ್ಳುವುದು ನನ್ನ ಕರ್ತವ್ಯ, ತೆಗೆದುಕೊಂಡಿದ್ದೇನೆ. ವಿವರಣೆ ಕೇಳಿದ್ದರಿಂದ ಹೋಗಿ ಕೊಡುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ಹಿನ್ನೆಲೆ :
ಸಚಿವ ಜಮೀರ್ ಅಹ್ಮದ್ ಐಎಂಎ ಮಾಲೀಕ ಮನ್ಸೂರ್ ಗೆ ಬೆಂಗಳೂರಿನ ರಿಚ್ ಮಂಡ್ ರಸ್ತೆಯಲ್ಲಿರುವ ಅಂಗಡಿಯನ್ನು 9 ಕೋಟಿ ರೂ. ಗೆ ಮಾರಾಟ ಮಾಡಿ 5 ಕೋಟಿ ರೂ. ಹಣವನ್ನು ಮುಂಗಡವಾಗಿ ಪಡೆದಿದ್ದರು. ಉಳಿದ ಹಣಕ್ಕೆ ಮನ್ಸೂರ್ ಗೆ ಒತ್ತಾಯಿಸಿದ್ದಾಗಿಯೂ ಜಮೀರ್ ತಿಳಿಸಿದ್ದರು. ಈ ಆಸ್ತಿ ಮಾರಾಟದ ಬಗ್ಗೆ ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿಯೂ ಮಾಹಿತಿ ನೀಡಿದ್ದಾಗಿ ಜಮೀರ್ ಅಹ್ಮದ್ ತಿಳಿಸಿದ್ದರು.