ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸಜ್ಜುಗೊಳಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕೋವಿಡ್ ಸೋಂಕಿತರಿಗೆ ಯಾವುದೇ ಲೋಪವಾಗದಂತೆ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ ಸಚಿವರಾದ ವಸತಿ ಸಚಿವ ವಿ.ಸೋಮಣ್ಣ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಂಡೋಕ್ರೈನಾಲಜಿ ಕೇಂದ್ರದಲ್ಲಿ ಮಹಾನಗರ ಪಾಲಿಕೆ ಸಜ್ಜುಗೊಳಿಸಿರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಶೌಚಗೃಹ, ಫ್ಯಾನ್ಗಳ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದು ಸೂಚಿಸಿದರು. ಸಿಬ್ಬಂದಿ ಕೊರತೆ ಇದ್ದರೆ ತಕ್ಷಣವೇ ನೇಮಿಸಿಕೊಳ್ಳಲು ಆದೇಶ ನೀಡಿದ ಸಚಿವರು, ಸಂಕಷ್ಟದಲ್ಲಿರುವ ಕೋವಿಡ್ ರೋಗಿಗಳಿಗೆ ಮಾನಸಿಕವಾಗಿ ಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಶಾಸಕ ಎಸ್.ರಘು, ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ನಗರಪಾಲಿಕೆಯ ಜಂಟಿ ಆಯುಕ್ತೆ ಪಲ್ಲವಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವೈಧ್ಯಾಧಿಕಾರಿಗಳು ಸಚಿವರೊಂದಿಗಿದ್ದರು. ಇದಕ್ಕೂ ಮುನ್ನ ಸಚಿವ ವಿ.ಸೋಮಣ್ಣನವರು ಇಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೆಬ್ಬಾಳದ ವೆಟರ್ನರಿ ಕಾಲೇಜು ಆವರಣದಲ್ಲಿರುವ ಮಂಗಳ ರೈತ ಭವನದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ಗೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ ಹಾಗೂ ಶಾಸಕ ಭೈರತಿ ಸುರೇಶ್ ಅವರೊಂದಿಗೆ ಸ್ಥಳ ಪರಿವೀಕ್ಷಣೆ ಕೈಗೊಂಡು ಕೋವಿಡ್-19ರ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದರು.
ಕೋವಿಡ್ ರೋಗಿಗಳಿಗೆ ಸೂಕ್ತ ಔಷಧೋಪಚಾರ, ಆಹಾರ ಪೂರೈಕೆ ಬಗ್ಗೆ ಸಚಿವತ್ರಯರು ಪರಿಶೀಲನೆ ಮಾಡಿದರು. ಹೆಬ್ಬಾಳದ ರಾಜೀವ್ ಗಾಂಧಿ ಡೆಂಟಲ್ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಕೋವಿಡ್ ಕೇರ್ ಸೆಂಟರ್‌ಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.