ಬೆಂಗಳೂರು: ನಗರದಿಂದ ಕಟ್ಟಡ ಕಾರ್ಮಿಕರು ಗುಳೆ ಹೋಗದಂತೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕಟ್ಟಡ ಕಾರ್ಮಿಕರನ್ನು ಶೆಡ್ ಬಿಟ್ಟು ತೆರಳಲು ಒತ್ತಾಯಿಸಬಾರದು. ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷಕ್ಕೂ ಅಧಿಕ ಕೂಲಿ ಕಾರ್ಮಿಕರಿದ್ದಾರೆ. ಗ್ರಾನೈಟ್, ಟೈಲ್ಸ್, ಕಾಂಕ್ರೀಟ್ ಹಾಕುವ ಕಾರ್ಮಿಕರು ನಿತ್ಯ ಬೆಂಗಳೂರಿಂದ ಗುಳೆ ಹೋಗುತ್ತಿದ್ದಾರೆ. ಹೀಗಾಗಿ, ಕಠಿಣ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಎಲ್ಲ ಗುತ್ತಿಗೆದಾರರ ಜೊತೆ ಸಭೆ ನಡೆಸಿದ್ದೇವೆ. ಕಾರ್ಮಿಕರು ಶೆಡ್‌ಗಳನ್ನು ಬಿಟ್ಟು ಹೊರ ಹೋಗದಂತೆ, ಸಂಪೂರ್ಣ ಖರ್ಚು ಅವರೇ ಭರಿಸಬೇಕು ಎಂದು ಸೂಚಿಸಿದರು.
ಕಾರ್ಮಿಕರು ಟೆಂಪೋಗಳ ಮೂಲಕ ಹೋಗುವುದನ್ನು ತಡೆಯಬೇಕು. ಇದಕ್ಕಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಕಾರ್ಮಿಕರನ್ನು ಕರೆದೊಯ್ಯುವ ವಶಕ್ಕೆ ಪಡೆಯಲಾಗುತ್ತದೆ. ಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಲು ಬೆಂಗಳೂರು ಜಿಲ್ಲಾಧಿಕಾರಿಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸದ್ಯ 34 ಕೋಟಿ ರೂ. ಹಣ ಇದೆ ಎಂದು ವಿವರಿಸಿದರು.
ಕಲ್ಯಾಣ ಮಂಟಪಗಳಲ್ಲಿ, ತುಮಕೂರು ವಸ್ತು ಪ್ರದರ್ಶನ ಗ್ರೌಂಡ್‌ನಲ್ಲಿ ವಸತಿ, ಊಟ, ವೈದ್ಯಕೀಯ ಸೌಲಭ್ಯ ಕೊಡಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಊರಿಗೆ ತೆರಳಲು ಅವಕಾಶ ಕೊಡಬಾರದು. ಶೆಡ್ ಬಿಟ್ಟು ತೆರಳಲು ಮಾಲೀಕರು ಒತ್ತಾಯ ಮಾಡಿದರೆ ಕೂಡಲೇ ದೂರು ಕೊಡಿ. ಅಂತಹ ಮಾಲೀಕರನ್ನು ಬಂಧಿಸಲಾಗುವುದು. ಯಾರೂ ಬಾಡಿಗೆ ಮನೆಯಿಂದ ಹೊರ ಹೋಗುವಂತೆ ಒತ್ತಾಯಿಸಬಾರದು ಎಂದರು.