ಬೆಂಗಳೂರು : ಮತ್ತೊಮ್ಮೆ ತಾವು ರಾಜ್ಯದ ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗುತ್ತೇನೆಂದು ಹೇಳಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
ರಾಜ್ಯದಲ್ಲಿ ಪ್ರವಾಸ : ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಅನ್ನು ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಎಲ್ಲ ಮುಖಂಡರೊಂದಿಗೆ ಪ್ರವಾಸ ಮಾಡಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ನೀವು ನಿಮ್ಮ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಪ್ರವಾಸಕ್ಕೆ ಬನ್ನಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಸವಾಲು ಹಾಕಿದರು.
ದೇಶದ ಜನ ಪ್ರಧಾನಿ ಮೋದಿ ಮತ್ತು ಬಿಜೆಪಿ ಪರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಿ 135 ರಿಂದ 140 ಸ್ಥಾನಗಳಲ್ಲಿ 100ಕ್ಕೆ ನೂರರಷ್ಟು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗುತ್ತೇವೆ. ಮತ್ತೆ ಸರ್ಕಾರ ತರಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇವೆ ಎಂದರು.
ಬಜೆಟ್ಗೆ ಬಿಎಸ್ವೈ ಮೆಚ್ಚುಗೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2022-23ನೇ ಸಾಲಿನ ಬಜೆಟ್ ಸರ್ವರ ಅಭ್ಯುದಯ, ಸರ್ವರ ಸ್ಪರ್ಶಿಯಾಗಿದೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಅಭಿವೃದ್ಧಿಗೆ ಪೂರಕವಾಗಿ ಒಳ್ಳೆಯ ಬಜೆಟ್ ಮಂಡಿಸಿದ್ದಾರೆ.
ಕೋವಿಡ್ ಸಂಕಷ್ಟದ ಇತಿಮಿತಿಯಲ್ಲೂ ಉತ್ತಮ ಆಯವ್ಯಯ ಮಂಡಿಸಿರುವುದನ್ನು ಸ್ವಾಗತಿಸುತ್ತೇನೆ. ಇಂತಹ ಒಳ್ಳೆಯ ಬಜೆಟ್ ಮಂಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಾಲದ ಪ್ರಮಾಣ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ನಾನು ಕೂಡ 8 ಬಜೆಟ್ ಮಂಡಿಸಿದ್ದೇನೆ. 2006-7ರಿಂದ 2022-23ರವರೆಗೆ ಎರಡು ವರ್ಷದಲ್ಲಿ ಮಾತ್ರ ರಾಜಸ್ವ ಕೊರತೆ ಉಂಟಾಗಿದೆ. 2022-23ರಲ್ಲಿ 14,699 ಕೋಟಿ ರೂ. ರಾಜಸ್ವ ಕೊರತೆಯಾಗಲಿದೆ. ಕೋವಿಡ್ ಲಾಕ್ಡೌನ್ನಿಂದ ರಾಜ್ಯ ಮತ್ತು ರಾಷ್ಟ್ರದ ರಾಜಸ್ವ ಆದಾಯದಲ್ಲಿ ಗಣನೀಯವಾಗಿ ಕುಸಿತವಾಗಿದೆ. ಆರೋಗ್ಯ ಕ್ಷೇತ್ರದ ವೆಚ್ಚ ಹೆಚ್ಚಾಗಿದೆ.
ರಾಜಸ್ವ ಸ್ವೀಕೃತಿ ಮತ್ತು ವೆಚ್ಚಗಳ ನಡುವೆ ಸಮತೋಲನವಾಗದೆ ಕೊರತೆ ಉಂಟಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅನ್ವಯ ಸಮತೋಲನ ಕಾಯ್ದುಕೊಳ್ಳಲಾಗುವುದು. ಬದ್ಧತಾ ವೆಚ್ಚ ಹೆಚ್ಚಾಗುತ್ತಿದೆ. ಪಿಂಚಣಿ, ಬಡ್ಡಿ, ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡಲಾಗುವುದು. ಉತ್ತಮ ವೇತನ ನೀಡಿದರೆ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಾರೆ. ಯೋಜನೆಗಳು ಜನರಿಗೆ ತಲುಪುತ್ತವೆ ಎಂದರು.
ಅಧಿಕಾರಿ ವೇತನ ಸಮಿತಿ : ಎಲ್ಲ ವೃಂದದ ಸರ್ಕಾರಿ ನೌಕರರ ಪ್ರಮಾಣ 7.63 ಲಕ್ಷ ಇದ್ದು, 2.50 ಲಕ್ಷದಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದ 8 ಸಾವಿರ ಕೋಟಿ ರೂ.ನಷ್ಟು ಉಳಿತಾಯವಾಗಲಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ವೇತನ ನೀಡಲು ಅಧಿಕಾರಿ ವೇತನ ಸಮಿತಿ ರಚಿಸಲು ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿತ್ತು. ಈ ಸಂಬಂಧ ಮುಖ್ಯಮಂತ್ರಿಗಳು ನಿರ್ಣಯ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ರೈತರಿಗೆ ನೀಡುವ ಸಹಾಯಧನದಿಂದ ಜಿಡಿಪಿ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಬದ್ಧತಾ ವೆಚ್ಚ ಕಡಿಮೆ ಮಾಡಲಾಗದು. ರಾಜಸ್ವ ಸಂಗ್ರಹ ಉತ್ತಮವಾಗಬಹುದು ಎಂಬ ನಿರೀಕ್ಷೆಯಿದೆ. ಜಿಎಸ್‍ಟಿ ಪರಿಹಾರವನ್ನು ಮುಂದಿನ ಮೂರು ವರ್ಷಗಳವರೆಗೆ ವಿಸ್ತರಣೆ ಮಾಡಲು ಒತ್ತಾಯ ಮಾಡೋಣ. ರಾಜ್ಯದ ಆಂತರಿಕ ಉತ್ಪನ್ನದ ಪ್ರಮಾಣ ಶೇ.9.6ರಷ್ಟು ಆಗುವ ನಿರೀಕ್ಷೆಯಿದೆ ಎಂದು ಹೇಳಿ ಬಜೆಟ್ ಬಗ್ಗೆ ಶ್ಲಾಘಿಸಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಒಳ್ಳೆಯ ಬಜೆಟ್ ಎಂದು ಹೇಳಿದ್ದೀರಿ. ಅನಗತ್ಯ ಹುದ್ದೆ ಮತ್ತು ವೆಚ್ಚ ಕಡಿಮೆ ಮಾಡಿ ಎಂದು ಹೇಳಿದ್ದೇನೆ ಹೊರತು ಪಿಂಚಣಿ ನಿಲ್ಲಿಸಿ ಎಂದು ಹೇಳಿಲ್ಲ. ಬದ್ಧತಾ ವೆಚ್ಚ ಅನಿವಾರ್ಯ. ಅನುತ್ಪಾದಕ ವೆಚ್ಚ ಬೇಡ. ಯಡಿಯೂರಪ್ಪ ಅವರು ಬಜೆಟ್ ಅನ್ನು ಹೊಗಳಿದ್ದಾರೆ ಸಂತೋಷ. ನಾವು ಬಜೆಟ್ ಮೇಲೆ ಎತ್ತಿರುವ ಆಕ್ಷೇಪಗಳಿಗೆ, ವಿರೋಧಗಳಿಗೆ ಕಾರಣವನ್ನೂ ಕೊಟ್ಟಿರುವುದಾಗಿ ಸಮರ್ಥಿಸಿಕೊಂಡರು.