ಬೆಂಗಳೂರು: ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ ಜನಾಂದೋಲನ ಆಗುವಂತೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದ ಮಿಂಟೋ ಕಣ್ಣಾಸ್ಪತ್ರೆಯ 125ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದ ಸಚಿವ ಸುಧಾಕರ್ ಆಸ್ಪತ್ರೆಯಲ್ಲಿ ಗಿಡ ನೆಟ್ಟು, ಕೇಕ್ ಕಟ್ ಮಾಡಿ ಸಿಬ್ಬಂದಿಯೊಂದಿಗೆ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಸಚಿವರು, ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್‍ಕುಮಾರ್ ನೇತ್ರದಾನ ಮಾಡಿ ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ತಂತ್ರಜ್ಞಾನ ವಿಶಿಷ್ಟವಾಗಿ ಬೆಳೆದಿರುವುದರಿಂದ ಒಬ್ಬರು ನಾಲ್ಕು ಜನರಿಗೆ ದೃಷ್ಟಿ ನೀಡಲು ಸಾಧ್ಯವಾಗುತ್ತದೆ. ದೇಶದಲ್ಲಿ 3-4 ಕೋಟಿ ಜನರಿಗೆ ಅಂಧತ್ವ ಇದೆ. ಆದ್ದರಿಂದ ದಾನಿಗಳ ಸಂಖ್ಯೆ ಹೆಚ್ಚಾಗಬೇಕಿದೆ. ಮರಣ ಹೊಂದಿದ ನಂತರವೂ ನಾಲ್ಕು ಜನರಿಗೆ ದೃಷ್ಟಿ ನೀಡಿ ಅವರಿಗೆ ಜಗತ್ತು ನೋಡಲು ಅವಕಾಶ ನೀಡಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಕೂಡ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ನಾನು ಕೂಡ ಕಳೆದ ವರ್ಷವೇ ನೇತ್ರದಾನ ಮಾಡಲು ಪ್ರತಿಜ್ಞೆ ಮಾಡಿದ್ದೇನೆ. ಇದನ್ನು ಆಂದೋಲನದಂತೆ ನಡೆಸಿ ನೇತ್ರದಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
'ಪ್ಲೇಗ್‌ನಿಂದ ಕೋವಿಡ್‌ವರೆಗೆ ಸೇವೆ'
ಕೋವಿಡ್ ಸಮಯದಲ್ಲಿ ಮಿಂಟೋ, ವಿಕ್ಟೋರಿಯಾ ಆಸ್ಪತ್ರೆಯನ್ನು ಮೀಸಲಿಡಲಾಗಿತ್ತು. ಆದರೆ ಈಗ ಎಲ್ಲ ಬಗೆಯ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಧೈರ್ಯವಾಗಿ ಬಂದು ಇತರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದು. ಅನೇಕ ವೈದ್ಯರು, ಶುಶ್ರೂಷಕರು, ವೈದ್ಯಕೀಯೇತರ ಸಿಬ್ಬಂದಿಯ ಶ್ರಮದಿಂದಾಗಿ ಮಿಂಟೋ ಕಣ್ಣಾಸ್ಪತ್ರೆಯು 125ನೇ ವರ್ಷಕ್ಕೆ ಕಾಲಿಟ್ಟಿದೆ. ಇಂತಹ ಸಂಸ್ಥೆ ಇರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದು ಸಚಿವರು ಹೇಳಿದರು.
1896ರಲ್ಲಿ ಡಿಸ್ಪೆನ್ಸರಿಯಾಗಿ ಆರಂಭವಾದ ಸಂಸ್ಥೆ 125 ವರ್ಷದವರೆಗೂ ಸೇವೆ ನೀಡಿದೆ. ಪ್ಲೇಗ್‌ನಿಂದ ಆರಂಭವಾಗಿ ಇತ್ತೀಚೆಗೆ ಕೋವಿಡ್ ತಡೆಗಟ್ಟುವವರೆಗೂ ಈ ಸಂಸ್ಥೆ ಕಾರ್ಯನಿರ್ವಹಿಸಿದೆ. ಇಂದು ಒಪಿಡಿಗೆ ಸುಮಾರು 800 ರೋಗಿಗಳು ಬರುತ್ತಿದ್ದಾರೆ. ವರ್ಷಕ್ಕೆ ಸುಮಾರು 10 ಸಾವಿರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಸುಧಾಕರ್ ವಿವರಿಸಿದರು.