ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಚುನಾವಣಾ ಜಿದ್ದಾಜಿದ್ದಿ ಜೋರಾಗಿದೆ.
ಇಂದು ಯಶವಂತಪುರ ರಣಕಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಟಿ. ಸೋಮಶೇಖರ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಕ್ಸಮರ ನಡೆಸಿದರು. ಚಲನಚಿತ್ರ ನಟಿಯೊಬ್ಬರು ಬಿಡಿಎ ಫೈಲ್ಗೆ ಸಹಿ ಹಾಕಿರೋ ವಿಚಾರವಾಗಿ ಇಂದು ಬೆಳಗ್ಗೆ ಎಸ್. ಟಿ. ಸೋಮಶೇಖರ್ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಟಿಯೊಬ್ಬರು ಬಿಡಿಎ ಕಡತಕ್ಕೆ ಸಹಿ ಹಾಕಿಸಿಕೊಂಡಿದ್ದರು ಎಂದು ಆರೋಪಿಸಿದ್ದರು. ಈ ವಿಚಾರವಾಗಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡುತ್ತಾ, ಎಸ್. ಟಿ. ಸೋಮಶೇಖರ್ಗೆ ಬುದ್ಧಿಭ್ರಮಣೆಯಾಗಿದೆ ಎಂದು ಹೇಳಿದ್ದರು. ಈ ವಿಚಾರವಾಗಿ ಮತ್ತೆ ಕೆಂಡಾಮಂಡಲರಾದ ಎಸ್. ಟಿ. ಸೋಮಶೇಖರ್ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಅಶೋಕ ಹೋಟೆಲ್ನಲ್ಲಿ ಚಲನಚಿತ್ರ ನಟಿಯೊಬ್ಬರು ಬಿಡಿಎ ಆಯುಕ್ತ ರಾಜೇಶ್ ಸಿಂಗ್ರನ್ನು ಭೇಟಿಯಾಗಿದ್ದರು. ಭೇಟಿಯಾಗಿ ಫೈಲ್ಗೆ ಸಹಿ ಮಾಡಿಸಿಕೊಂಡು ಹೋಗಿದ್ದಾರೆ. ಆ ಸುದ್ದಿ ಮಾಧ್ಯಮದಲ್ಲಿ ಬಂತು. ಹೀಗಾಗಿ ಬಿಡಿಎ ಅಧ್ಯಕ್ಷನಾಗಿದ್ದ ನಾನು, ನನ್ನ ಗಮನಕ್ಕೆ ಈ ವಿಷಯ ಬರದೇ ಯಾವ ಕಡತಕ್ಕೆ ಸಹಿ ಹಾಕಲಾಗಿದೆ ಎಂದು ಅಂದಿನ ಡಿಸಿಎಂ ಪರಮೇಶ್ವರ್ಗೆ ಕೇಳಿದ್ದೆ. ಇದು ನನ್ನ ಕರ್ತವ್ಯ. ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದರಲ್ಲಿ ತಪ್ಪೇನಿದೆ. ಅದಕ್ಕೆ ಹೆಚ್ಡಿಕೆ ರೋಷಗೊಳ್ಳುವುದರಲ್ಲೇನಿದೆ? ಬಿಡಿಎ ಚೇರ್ಮೆನ್ ಆಗಿ ಇದನ್ನು ಪ್ರಶ್ನಿಸುವುದು, ಸಂಬಂಧಿಸಿದವರ ಗಮನಕ್ಕೆ ತರುವುದು ನನ್ನ ಕರ್ತವ್ಯ. ಇದರಲ್ಲಿ ಕುಮಾರಸ್ವಾಮಿ ಶಾಮೀಲಾಗಿದ್ದಾರೆ ಎಂದು ನಾನು ಹೇಳಿಲ್ಲ. ನನಗೇನು ಬುದ್ಧಿಭ್ರಮಣೆಯಾಗಿಲ್ಲ ಎಂದು ಸೋಮಶೇಖರ್ ತಿರುಗೇಟು ನೀಡಿದರು.
ಯಾವ ಹೋಟೆಲ್ನಲ್ಲಿ ನಿಂತು ಯಾವ ಫೈಲ್ಗೆ ಸಹಿ ಮಾಡಿದ್ದೀರಿ ಅಂತ ಈಗ ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ.
ಕಳೆದ ಒಂದು ವರ್ಷ ಅವಧಿಯಲ್ಲಿ ಕುಮಾರಸ್ವಾಮಿ ಎಷ್ಟು ಅನುದಾನ ಕೊಟ್ಟಿದ್ದಾರೆ? ಎಷ್ಟು ಬಾರಿ ನಾನು ಅವರನ್ನು ಭೇಟಿ ಆಗಿದ್ದೇನೆ? ನಿಮ್ಮ ನಿಮ್ಮ ಕ್ಷೇತ್ರಗಳಿಗೆ ನೀವು ಎಷ್ಟು ಅನುದಾನ ತಗೊಂಡು ಹೋಗಿದ್ದೀರಿ? ಎಲ್ಲವನ್ನೂ ಬಹಿರಂಗ ಪಡಿಸಿ. ನಾನೂ ಕೂಡಾ ಬಹಿರಂಗ ಚರ್ಚೆ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಕೂಡಾ ಹಾಕಿದರು.