ಬೆಂಗಳೂರು: ನನಗೆ ಯಾವುದೇ ವಿರೋಧ ಪಕ್ಷದ ನಾಯಕನ ಸ್ಥಾನ ಬೇಡ. ಯಾವ ರಾಜಕಾರಣಿಗಳು ಏನೆಂದರು ಎನ್ನುವುಕ್ಕೆ ಪ್ರತಿಕ್ರಿಯೆ ನೀಡಲು ನನಗೆ ಸಮಯವಿಲ್ಲ, ನನ್ನನ್ನು ನನ್ನ ಪಾಡಿಗೆ ಬಿಟ್ಟರೆ ಸಾಕು ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ 14 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಕೈ ಕೆಳಗೆ ನಾನು ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ನಡೆದ ಎಲ್ಲ ಕೆಲಸಗಳಿಗೂ ನಾನು ಬದ್ಧವಾಗಿದ್ದೇನೆ ಎಂದರು.
ತಾವು ಪ್ರತಿಪಕ್ಷದ ನಾಯಕರಾಗಿ ಎಂಬ ಪ್ರಶ್ನೆಗೆ, ನನಗೆ ಯಾವುದೇ ವಿರೋಧ ಪಕ್ಷದ ನಾಯಕನ ಸ್ಥಾನ ಬೇಡ. ಯಾರ್ಯಾರು ಅರ್ಜೆಂಟ್ ಅಲ್ಲಿ ಇದ್ದಾರೆ ಅವರಿಗೆ ಅವಕಾಶ ಸಿಗಲಿ. ಕಾರು ಬೇಕಾದವರು, ಮನೆ ಬೇಕಾದವರು ಪ್ರಯತ್ನ ಮಾಡಲಿ. ನನಗೆ ಇರುವ ಮನೆ ಸಾಕು. ಪಕ್ಷ ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದಕ್ಕೆ ಬದ್ಧವಾಗಿ ಇರುತ್ತೇನೆ. ಇನ್ನು ದಿಲ್ಲಿಯಿಂದ ಹೈಕಮಾಂಡ್ ನಾಯಕರು ನಾಳೆ ಬರುತ್ತಿದ್ದಾರೆ. ಅವರು ಚರ್ಚಿಸಿ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಯಾರು ಅರ್ಹರು ಅಂತಿಮಗೊಳಿಸಲಿದ್ದಾರೆ ಎಂದರು.