ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ವಕೀಲ ರಾಜೇಶ್ ಎಂಬವರ ಪತ್ನಿ ನಿತ್ಯಶ್ರೀ (25) ಕಳೆದ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಇದೀಗ ತಲೆಮರೆಸಿಕೊಂಡಿದ್ದ ಪತಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಗಿರಿನಗರದ ದ್ವಾರಕನಗರದಲ್ಲಿ ನಡೆದಿದ್ದ ಘಟನೆಗೆ ರಾಜೇಶ್ ಕಾರಣ ಎಂದು ನಿತ್ಯಶ್ರೀ ಪೋಷಕರು ದೂರಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಅರೆಸ್ಟ್ ಮಾಡುವಂತೆ ಪ್ರತಿಭಟನೆ ಕೂಡ ಮಾಡಲಾಗಿತ್ತು.
ಪ್ರಕರಣದ ವಿವರ:
2019ರಲ್ಲಿ ರಾಜೇಶ್ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ನಿತ್ಯಶ್ರೀ ಅವರನ್ನು ವಿವಾಹವಾಗಿದ್ದರು. ದಂಪತಿ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ದ್ವಾರಕಾನಗರದ ಕೃಷ್ಣ ಟೆಂಪಲ್ ಬಳಿಯ ಮನೆಯೊಂದರಲ್ಲಿ ವಾಸವಿದ್ದರು. ಇವರಿಗೆ ಒಂದು ವರ್ಷದ ಹೆಣ್ಣು ಮಗುವಿದೆ. ಕೆಲ ತಿಂಗಳಿಂದ ದಂಪತಿ ನಡುವೆ ಕಲಹ ನಡೆಯುತ್ತಿತ್ತು. ಕೆಲವೊಮ್ಮೆ ಈ ಜಗಳ ತಾರಕಕ್ಕೂ ಹೋಗಿ, ನಿತ್ಯಶ್ರೀ ತವರು ಮನೆಗೂ ಹೋಗಿ ಬಂದಿದ್ದರು.
ಶುಕ್ರವಾರ ಕೂಡ ಪತಿ-ಪತ್ನಿ ನಡುವೆ ಜಗಳವಾಗಿದೆ. ಇದರಿಂದ ಕೋಪಗೊ೦ಡ ಗೃಹಿಣಿ ಮಧ್ಯಾಹ್ನ 12.30ರ ಸುಮಾರಿಗೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು.
ಕೊಲೆ ಎಂದು ಕುಟುಂಬಸ್ಥರ ಆರೋಪ:
ಮಗಳ ಕೊಲೆಯ ಹಿಂದೆ ರಾಜೇಶ್ ಕೈವಾಡವಿದೆ ಎಂದು ಆರೋಪಿಸಿ ಮೃತ ಮಹಿಳೆ ಪೋಷಕರು ಮನೆ ಮುಂದೆ ಪ್ರತಿಭಟಿಸಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ರಾಜೇಶ್‌ನನ್ನು ವಶಕ್ಕೆ ಪಡೆಯುವ ಭರವಸೆ ನೀಡಿದರೂ ಕೇಳದ ಕುಟುಂಬಸ್ಥರು, ಆತನನ್ನು ಕೂಡಲೇ ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು.
ಬೇರೆ ಮಹಿಳೆಯ ಜೊತೆ ಸಂಬಂಧ?
ಪೋಷಕರು 20 ಲಕ್ಷ ರೂ. ಸಾಲ ಮಾಡಿ ಮಗಳ ಮದುವೆ ಮಾಡಿಕೊಟ್ಟಿದ್ದರು. ಮದುವೆ ಆದಾಗಿನಿಂದಲೂ ಗಂಡನ ಮನೆಯವರು ನಿತ್ಯಶ್ರೀಗೆ ಕಿರುಕುಳ ಕೊಡುತ್ತಿದ್ದರು. ಪತಿ ರಾಜೇಶ್‌ಗೆ ಬೇರೆ ಮಹಿಳೆಯ ಜೊತೆ ಸಂಬಂಧವಿತ್ತು. ಅಲ್ಲದೇ, ಒಂದು ವರ್ಷದ ಮಗುವಿಗೂ ತೊಂದರೆ ಕೊಡುತ್ತಿದ್ದರು ಎಂದು ಮೃತ ಮಹಿಳೆ ಚಿಕ್ಕಮ್ಮ ಶೋಭಾ ಆರೋಪಿಸಿದ್ದರು.
ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ : ಆತ್ಮಹತ್ಯೆಯೋ.. ಕೊಲೆಯೋ?