ಬೆಂಗಳೂರು: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ಶೀಘ್ರದಲ್ಲಿ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿ.17ಕ್ಕೆ ನಿಗದಿ ಮಾಡಿದೆ.
ಅವಧಿ ಪೂರ್ಣಗೊಂಡಿರುವ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ನಿರ್ದೇಶಿಸಬೇಕು ಎಂದು ಸ್ಥಳೀಯರಾದ ಗುರುನಾಥ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಅಕ್ರಮ ಕಟ್ಟಡ: ಇಒಗೆ ಹೈಕೋರ್ಟ್ ನೋಟಿಸ್
ಕೆಲಕಾಲ ವಾದ - ಪ್ರತಿವಾದ ಆಲಿಸಿದ ಪೀಠವು, ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ ಅರ್ಜಿಯನ್ನು ಡಿ.17ಕ್ಕೆ ನಿಗದಿ ಪಡಿಸಿತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಅವಧಿ 2019ರ ಮಾರ್ಚ್ 6ಕ್ಕೆ ಪೂರ್ಣಗೊಂಡಿದೆಯಾದರೂ ಈವರೆಗೂ ಚುನಾವಣೆ ನಡೆದಿಲ್ಲ. ಇನ್ನು, ರಾಜ್ಯದಲ್ಲಿ ಅವಧಿ ಮುಗಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅಗತ್ಯ ನಿರ್ದೇಶನ ನೀಡುವ ಕುರಿತಾಗಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ಡಿ.17ರಂದೇ ವಿಚಾರಣೆಗೆ ಬರಲಿದೆ.