ಬೆಂಗಳೂರು: ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದೆ. ಕೋವಿಡ್-19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಎಸ್ಡಿಆರ್ಎಫ್ ಮೂಲಕ ಈವರೆಗೆ ಬಿಡುಗಡೆ ಮಾಡಿರುವ ಹಣದ ವಿವರ ಇಲ್ಲಿದೆ.
ಕೋವಿಡ್-19 ನಿಯಂತ್ರಣ ಸದ್ಯ ರಾಜ್ಯ ಸರ್ಕಾರದ ಪರಮೋಚ್ಚ ಗುರಿ. ಹೀಗಾಗಿ ಸರ್ಕಾರ ಬಹುಪಾಲು ಸಂಪನ್ಮೂಲವನ್ನು ಕೊರೊನಾ ಹೋರಾಟಕ್ಕೆ ಬಳಸುತ್ತಿದೆ. ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್ ಜೊತೆಗೆ ಕೊರೊನಾ ನಿಯಂತ್ರಣಕ್ಕೂ ಕೋಟ್ಯಾಂತರ ರೂ. ಹಣವನ್ನು ನೀಡುತ್ತಿದೆ. ಸಾಂಕ್ರಾಮಿಕ ರೋಗ ಕೊರೊನಾವನ್ನು ವಿಪತ್ತು ಎಂದು ಪರಿಗಣಿಸಿರುವ ಹಿನ್ನೆಲೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ ಡಿಆರ್ ಎಫ್) ನಿಧಿಯ ಅನುದಾನವನ್ನು ಕೊರೊನಾ ನಿಯಂತ್ರಣಕ್ಕೆ ಬಳಸಲಾಗುತ್ತಿದೆ. ಎಸ್ ಡಿಆರ್ ಎಪ್ ಅನುದಾನವನ್ನು ಕೊರೊನಾ ಸಂಬಂಧ ವಿವಿಧ ಪರಿಕರಗಳ ಖರೀದಿ ಮತ್ತು ಕ್ವಾರಂಟೈನ್ ವೆಚ್ಚ ಭರಿಸಲು ಬಳಸಲಾಗುತ್ತಿದೆ.
ರಾಜ್ಯಕ್ಕೆ ಸಿಕ್ಕಿದ ಎಸ್ಡಿಆರ್ಎಫ್ ಅನುದಾನ ಎಷ್ಟು?
ಕೇಂದ್ರ ಸರ್ಕಾರ ಕೋವಿಡ್-19 ನಿಯಂತ್ರಣಕ್ಕಾಗಿ ಎಲ್ಲಾ ರಾಜ್ಯಗಳಿಗೆ ಮೊದಲ ಕಂತಿನ ಎಸ್ ಡಿಆರ್ ಎಫ್ ಅನುದಾನವನ್ನು ಏಪ್ರಿಲ್ ಮೊದಲ ವಾರದಲ್ಲಿ ಮುಂಗಡವಾಗಿ ಬಿಡುಗಡೆ ಮಾಡಿದೆ. ಕೋವಿಡ್-19 ಮಹಾಮಾರಿ ನಿಭಾಯಿಸಲು ಕೇಂದ್ರ ಸರ್ಕಾರ ಎಸ್ ಡಿಆರ್ ಎಫ್ ನಿಂದ ಮೊದಲ ಕಂತಿನಲ್ಲಿ ಎಲ್ಲಾ ರಾಜ್ಯಗಳಿಗೆ 11,092 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಪೈಕಿ ಕರ್ನಾಟಕ ತನ್ನ ಪಾಲಿನ 395 ಕೋಟಿ ರೂ. ಪಡೆದಿದೆ. ಈ ಹಣವನ್ನು ಸರ್ಕಾರ ಕೋವಿಡ್ -19 ನಿಯಂತ್ರಣ, ಸುರಕ್ಷಾ ಪರಿಕರಗಳ ಖರೀದಿ, ಕಂಟೈನ್ಮೆಂಟ್ ಜೋನ್ ನಿರ್ವಹಣೆ, ಕ್ವಾರಂಟೈನ್ ವೆಚ್ಚಕ್ಕಾಗಿ ಬಳಸಲಾಗುತ್ತಿದೆ.
ಈವರೆಗೆ ರಾಜ್ಯ ಬಿಡುಗಡೆ ಮಾಡಿದ್ದೆಷ್ಟು?
ಈವರೆಗೆ ರಾಜ್ಯ ಸರ್ಕಾರ ತನ್ನ ಪಾಲಿಗೆ ಬಿಡುಗಡೆಯಾದ 395 ಕೋಟಿ ರೂ. ಎಸ್ ಡಿಆರ್ ಎಫ್ ಅನುದಾನದಲ್ಲಿ ಒಟ್ಟು 208.01 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಯಾರಿಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ :
- ಆರೋಗ್ಯ ಇಲಾಖೆಗೆ 20 ಕೋಟಿ ರೂ.
- ಬಿಬಿಎಂಪಿಗೆ 25 ಕೋಟಿ ರೂ.
- ಪೊಲೀಸರ ರಕ್ಷಣಾಕವಚ ಖರೀದಿಗೆ 5 ಕೋಟಿ ರೂ.
- ಎಲ್ಲಾ ಜಿಲ್ಲಾಧಿಕಾರಿಗಳಿಗೆ 153.10 ಕೋಟಿ ರೂ.
- ಕಾರಾಗೃಹ ಇಲಾಖೆಗೆ 2 ಕೋಟಿ ರೂ.
- ಚಾಮರಾಜನಗರ ಲ್ಯಾಬ್ ಗೆ 1.79 ಕೋಟಿ ರೂ.
- ರಾಮನಗರ ಟೆಸ್ಟಿಂಗ್ ಲ್ಯಾಬ್ ಗೆ 1.12ಕೋಟಿ ರೂ.