ಬೆಂಗಳೂರು: ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ 2022- 23ನೇ ಸಾಲಿನ ಬಜೆಟ್ನಲ್ಲಿ ಒಟ್ಟು 56,710 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕಾನೂನು ಸುವ್ಯವಸ್ಥೆ, ಕಂದಾಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗೃಹ ಇಲಾಖೆ, ಇ-ಆಡಳಿತ ಹಾಗೂ ಸಾರಿಗೆ ಮತ್ತಿತರೆ ಕ್ಷೇತ್ರಗಳಲ್ಲಿ ಈ ಅನುದಾನ ವಿನಿಯೋಗವಾಗಲಿದೆ.
ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಮೇರೆಗೆ ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ತಲುಪಿಸಲು ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆಡಳಿತ ಸುಧಾರಣೆಗಾಗಿ ಶಿಫಾರಸುಗಳನ್ನು ನೀಡಲು ಸರ್ಕಾರ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ರಚಿಸಿದ್ದು, ಹಂತಹಂತವಾಗಿ ಅದರ ಶಿಫಾರಸ್ಸುಗಳನ್ನು ಜಾರಿಗೊಳಿಸುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ.
ಮಹಿಳೆಯರ ಪಿಂಚಣಿ ಹೆಚ್ಚಳ: ಪ್ರಸಕ್ತ ಸಾಲಿನಿಂದ ಅವಿವಾಹಿತ, ವಿಚ್ಛೇದಿತ ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು 600 ರಿಂದ 800 ರೂ.ಗಳಿಗೆ ಏರಿಕೆ ಮಾಡಲಾಗಿದ್ದು, ಸೌಲಭ್ಯ 1.32 ಲಕ್ಷ ಫಲಾನುಭವಿಗಳಿಗೆ ಸಿಗಲಿದೆ. ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಪ್ರಸ್ತುತ ನೀಡುತ್ತಿರುವ ಮಾಸಿಕ ಪಿಂಚಣಿ ಮೊತ್ತವನ್ನು 3 ಸಾವಿರದಿಂದ 10 ಸಾವಿರಕ್ಕೆ ಏರಿಸಲಾಗಿದೆ. ಅಲ್ಲದೇ, ಆ್ಯಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ಹೊಸ ಯೋಜನೆಗಳನ್ನು ರೂಪಿಸುವ ಗುರಿ ಹೊಂದಿದೆ.
ಡ್ರೋನ್ ಮೂಲಕ ಜಮೀನು ಸರ್ವೆ: ಇದೇ ಮೊದಲ ಬಾರಿಗೆ ಕೃಷಿ ಜಮೀನು ಮತ್ತು ಇತರೆ ಸ್ವತ್ತುಗಳನ್ನು ಡ್ರೋನ್ ಆಧಾರಿತ ಸರ್ವೆ ಕಾರ್ಯವನ್ನು ರಾಜ್ಯಾದ್ಯಂತ 287 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, 3 ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ವಿದ್ಯುನ್ಮಾನ ಪಹಣಿ ಹಾಗೂ ನಕ್ಷೆಗಳನ್ನು ಒದಗಿಸಲಾಗುತ್ತದೆ.
ಪ್ರವಾಹದಿಂದ ಹಾನಿಗೊಳಗಾದ ಬೆಳೆಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 2,453 ಕೋಟಿ ರೂಪಾಯಿ ಇನ್ಪುಟ್ ಸಬ್ಸಿಡಿ ವಿತರಿಸಲಾಗಿದೆ. ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ.
ಇ- ಆಡಳಿತ ಮೇಲ್ದರ್ಜೆಗೆ: ಉಪನೋಂದಣಾಧಿಕಾರಿಗಳ ಕಚೇರಿ ಐಟಿ ಸೌಲಭ್ಯಗಳನ್ನು 406 ಕೋಟಿ ರೂಪಾಯಿ ವೆಚ್ಚದಲ್ಲಿ ಉನ್ನತೀಕರಿಸಲು ಯೋಜನೆ ರೂಪಿಸಲಾಗಿದೆ. ಎಲ್ಲಾ ಪಾರಂಪರಿಕ ನೋಂದಾಯಿತ ಶಾಶ್ವತ ದಾಖಲೆಗಳ ಸ್ಕ್ಯಾನಿಂಗ್ ಮಾಡಲು ಕ್ರಮ ಕೈಗೊಳ್ಳುವುದು. ಮೊದಲ ಹಂತದಲ್ಲಿ ಬಿಬಿಎಂಪಿ ಮತ್ತು 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ದಾಖಲೆಗಳ ಸ್ಕ್ಯಾನಿಂಗ್‌ಗೆ 15 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಇ-ಆಡಳಿತ ಇಲಾಖೆ ಹಾಗೂ ಐಐಟಿ-ಬೆಂಗಳೂರು ಪಾಲುದಾರಿಕೆಯಲ್ಲಿ Centre for Technology Research in Digital Governance ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ.
ದೇವಾಲಯಗಳಿಗೆ ಸ್ವಾಯತ್ತತೆ: ಭಕ್ತಾದಿಗಳ ಬೇಡಿಕೆಯಂತೆ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ, ರಾಜ್ಯದಲ್ಲಿರುವ ದೇವಾಲಯಗಳ ಅಭಿವೃದ್ಧಿಗೆ 2021-22 ಸಾಲಿನಲ್ಲಿ 168 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ತಸ್ತಿಕ್ ಮೊತ್ತ 60,000 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಭಕ್ತಾದಿಗಳಿಗೆ ಆನ್‌ಲೈನ್ ಮುಖಾಂತರ ವಿವಿಧ ಸೇವೆಗಳನ್ನು ಒದಗಿಸಲು Integrated Temple Management System ತಂತ್ರಾಂಶ ಜಾರಿಗೊಳಿಸಲಾಗಿದೆ.
ನಾಗರಿಕ ಸೇವೆ ಸರಳೀಕರಣ: ಮನೆಗಳು, ವಸತಿ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದೆ.