ಬೆಂಗಳೂರು: ರಾಜ್ಯದಲ್ಲಿ ಮನೆ ನಿವೇಶನ ಹೊಂದಿರದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳ ಪಟ್ಟಿಮಾಡಿ ಅವರಿಗೆ ತ್ವರಿತವಾಗಿ ನಿವೇಶನಗಳನ್ನು ಒದಗಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ನಾಲ್ಕು ವಿಭಾಗಗಳ ಒಂದೊಂದು ಜಿಲ್ಲೆಯನ್ನು ಮಾದರಿಯಾಗಿ ಆಯ್ಕೆ ಮಾಡಲಾಗಿದೆ.
ಸೋಮವಾರ ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಗಳನ್ನು ಆಯ್ಕೆ ಮಾಡಲಾಯಿತು. ರಾಜ್ಯಾದ್ಯಂತ ಮನೆ/ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳಿಗೆ ಮನೆ/ನಿವೇಶನಗಳನ್ನು ನೀಡಬೇಕು.
ಈ ಮಹತ್ವದ ಕಾರ್ಯವನ್ನು ನಡೆಸಲು ಆರಂಭಿಕವಾಗಿ ನಾಲ್ಕು ವಿಭಾಗಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ನಾಲ್ಕು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ವಿಭಾಗದಲ್ಲಿ ಚಿತ್ರದುರ್ಗ, ಮೈಸೂರು ವಿಭಾಗದಲ್ಲಿ ಚಾಮರಾಜ ನಗರ, ಕಲಬುರಗಿ ವಿಭಾಗದಲ್ಲಿ ರಾಯಚೂರು ಮತ್ತು ಬೆಳಗಾವಿ ವಿಭಾಗದಲ್ಲಿ ಹಾವೇರಿ ಜಿಲ್ಲೆಯಲ್ಲಿ ಇದನ್ನು ಪೈಲಟ್ ಆಗಿ ಅನುಷ್ಠಾನಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ರಾಜ್ಯದಲ್ಲಿ ಈಗ ಒಟ್ಟು 5.46 ಲಕ್ಷ ಕುಟುಂಬಗಳು ಮನೆ/ನಿವೇಶನ ಹೊಂದಿಲ್ಲ. ಅವರಿಗೆ ಭೂಮಿ ಕೊಡುವುದು ಸರ್ಕಾರದ ಜವಾಬ್ದಾರಿ. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆದ್ಯತೆಯಲ್ಲಿ ಶೀಘ್ರ ಮನೆ ಒದಗಿಸಲು, ಆಯ್ದ ಜಿಲ್ಲೆಗಳಲ್ಲಿ ಸರ್ಕಾರಿ ಭೂಮಿ ಲಭ್ಯತೆ, ಮನೆ ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಬಳಿಕ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿವೇಶನ ಒದಗಿಸಲು ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡಿ, ಫಲಾನುಭವಿಗಳಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಸಚಿವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಅಸ್ಪೃಶ್ಯತೆ ನಿವಾರಣೆಗೆ ಸರ್ಕಾರ ಸಜ್ಜು: ಸಚಿವ ಕೋಟ