ಬೆಂಗಳೂರು: ಶೀಘ್ರದಲ್ಲೇ ಹುಕ್ಕಾ ಪಾರ್ಲರ್ಗಳನ್ನು ನಿಷೇಧಿಸಲಾಗುತ್ತದೆ ಎಂದು ವಿಧಾನ ಪರಿಷತ್ನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆ್ಯಂಟಿ ಡ್ರಗ್ ಪಾಲಿಸಿ ಜಾರಿಗೆ ತರಲಾಗುತ್ತದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಹಾಂತೇಶ್ ಕವಟಗಿಮಠ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಮಾದಕ ವಸ್ತು ಸೇವನೆ ಪಿಡುಗಾಗಿದೆ. ಸಮಾಜದಲ್ಲಿ ಇದನ್ನು ತೊಡೆದು ಹಾಕಬೇಕಿದೆ. ಸಿಂಥೆಟಿಕ್ ಡ್ರಗ್ಸ್ ಅನ್ನು ವಿದ್ಯಾರ್ಥಿಗಳಿಗೆ ಕೊಡುವ ಕೆಲಸವಾಗುತ್ತಿದೆ, ಚಾಕೊಲೇಟ್, ಬಿಸ್ಕೇಟ್ ರೂಪದಲ್ಲೂ ಡ್ರಗ್ಸ್ ತರಲಾಗುತ್ತಿದೆ. ಇದನ್ನು ನಿಲ್ಲಿಸಲು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯು ನಮ್ಮ ಇಲಾಖೆ ಜೊತೆ ಕೈ ಜೋಡಿಸಬೇಕಿದೆ. ಮಾಧ್ಯಮಗಳ ಸಹಕಾರವು ಅಗತ್ಯ ಎಂದರು.
ಶಾಲೆ ಆವರಣದಲ್ಲಿ ಇಂತಹ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ, ಚಟುವಟಿಕೆ ನಡೆದರೆ ಸಂಬಂಧಪಟ್ಟ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಸ್ಲಂನಲ್ಲೂ ಮಾದಕ ವಸ್ತು ವ್ಯಾಪಾರ ನಡೆಯುತ್ತಿದೆ. ಉನ್ನತ ಮಟ್ಟದಲ್ಲಿಯೂ ಮಾದಕ ವಸ್ತು ವ್ಯಾಪಾರ ನಡೆಯುತ್ತಿದ್ದು, ಇದರ ತಡೆಗೆ ಮುಂದಾಗಿದ್ದೇವೆ. ನೆರೆ ರಾಜ್ಯಗಳಿಂದ ಸಹ ಮಾದಕ ವಸ್ತು ಸರಬರಾಜಾಗುತ್ತಿದೆ. ಹಾಗಾಗಿ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ಇರಿಸಿದ್ದೇವೆ. ಬರುವ ದಿನದಲ್ಲಿ ಆ್ಯಂಟಿಡ್ರಗ್ ಪಾಲಿಸಿ ತರಲಾಗುತ್ತದೆ. ಈ ಕುರಿತು ಕೇಂದ್ರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದರು.
ಹುಕ್ಕಾ ಪಾರ್ಲರ್ಗೆ ಅನುಮತಿಯನ್ನು ಬಿಬಿಎಂಪಿ ಕೊಡಲಿದೆ. ಆದರೆ, ಹುಕ್ಕಾ ಪಾರ್ಲರ್ ಬ್ಯಾನ್ ಮಾಡಲು ನಾವು ತೀರ್ಮಾನಿಸಿದ್ದು, ಶೀಘ್ರದಲ್ಲೇ ಅದನ್ನು ಜಾರಿ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಕೆಪಿಎಸ್ಸಿ ಪರೀಕ್ಷಾ ವಿಧಾನದಲ್ಲಿ ಬದಲಾವಣೆ: ಕೆಪಿಎಸ್ಸಿ ಪರೀಕ್ಷಾ ಅವ್ಯವಹಾರ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಪದೇ ಪದೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಪ್ರದೀಪ್ ಶೆಟ್ಟರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಇತ್ತೀಚೆಗೆ ಕೆಪಿಎಸ್ಸಿ ಬಹಳಷ್ಟು ಚರ್ಚೆಯಲ್ಲಿದೆ. ಯಾವುದೇ ಪರೀಕ್ಷೆ ನಡೆದರೂ ಅವ್ಯವಹಾರದ ಆರೋಪ ಬರುತ್ತಿದೆ. ನಿಜವಾಗಿಯೂ ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಕೆಪಿಎಸ್ಸಿ ಸಿಬ್ಬಂದಿಯಿಂದಲೇ ಆಗಿದೆ. ಸುರಕ್ಷತೆಯಿಂದ ಇರಿಸಿಕೊಳ್ಳಬೇಕಾದವರೇ ಲೀಕ್ ಮಾಡಿದ್ದಾರೆ. ಈ ಕುರಿತು ಸದ್ಯಕ್ಕೆ ತನಿಖೆ ನಡೆಯುತ್ತಿದೆ. ನಂತರ ಸತ್ಯ ಹೊರಬರಲಿದೆ ಎಂದರು.
ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತರುವ ಚಿಂತನೆ ಅಗತ್ಯವಿದೆ. ಆನ್ಲೈನ್ ನಲ್ಲಿ ಸಣ್ಣ ಪರೀಕ್ಷೆ ಮಾಡಿ ನಂತರ ಮುಖ್ಯ ಪರೀಕ್ಷೆ ಮಾಡಬೇಕು ಎನ್ನುವುದು ಒಂದು, ಮತ್ತೊಂದು ಅಂಕಗಳ ಆಧಾರದಲ್ಲಿ ನೇಮಕ ಮಾಡುವುದು. ಈ ಎರಡೂ ವಿಚಾರದಲ್ಲಿ ಚಿಂತನೆ ನಡೆದಿದೆ. ಓರಲ್ ಮಾರ್ಕ್ಸ್ ಕಡಿಮೆ ಇರಬೇಕು ಎನ್ನುವ ಬೇಡಿಕೆ ಸಹ ಇದೆ. ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತರಲು ಚಿಂತನೆ ಮಾಡಲಾಗುತ್ತಿದೆ ಎಂದರು.
ತಿಂಥಿಣಿ ಬ್ರಿಡ್ಜ್ ಬಳಿ ಸಮತೋಲನ ಜಲಾಶಯ: ತಿಂಥಿಣಿ ಬ್ರಿಡ್ಜ್ ಬಳಿ ಸಮತೋಲನ ಜಲಾಶಯ ನಿರ್ಮಾಣ ಪ್ರಾಥಮಿಕ ಹಂತದಲ್ಲಿದೆ, ನೀರಿನ ಲಭ್ಯತೆ ಹಂಚಿಕೆ ಆಗಬೇಕು, ಅನುದಾನದ ಹಂಚಿಕೆ ಆಗಬೇಕು, ಆದಷ್ಟು ಬೇಗ ಈ ಎಲ್ಲವನ್ನು ಮುಗಿಸಿ ಸರ್ಕಾರ ಯೋಜನೆ ಆರಂಭದ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಬಸವರಾಜ ಪಾಟೀಲ್ ಇಟಗಿ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಆದಷ್ಟು ಬೇಗ ಕ್ರಮ ವಹಿಸಲಾಗುತ್ತದೆ. ಯಾವುದೇ ನೀರಾವರಿ ಯೋಜನೆಯಾದರೂ ಕೂಡ ಅದರಲ್ಲಿ ಕೊನೆಯ ಭಾಗಕ್ಕೆ ನೀರಿನ ಕೊರತೆ ಸಹಜ, ಮೇಲ್ಭಾಗದ ರೈತರು ಅಗತ್ಯ ನೀರು ಬಳಸಿ ಕೊನೆಯ ಭಾಗಕ್ಕೆ ಬಿಡಲು ಉತ್ಸಾಹ ತೋರಲ್ಲ, ಹಾಗಾಗಿ ನಾರಾಯಣಪುರ ಜಲಾಶಯದ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಇದನ್ನು ಸರಿಪಡಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.