ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಭ್ಯರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಮನವಿ ಮಾಡಬೇಕು. ಕೆಎಎಸ್ ಐಎಎಸ್ ಅಭ್ಯರ್ಥಿಗಳಿಗೆ ಕೋಚಿಂಗ್ ಸೆಂಟರ್ ನಿರ್ಮಾಣ ಮಾಡಬೇಕು. ಇದಕ್ಕೆ ಸಮುದಾಯದ ಸಚಿವರು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ವಿಜಯನಗರದಲ್ಲಿ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ "ಕೆಎಎಸ್‌ನಿಂದ ಐಎಎಸ್‌ಗೆ ಪದೋನ್ನತಿ ಪಡೆದ ಅಧಿಕಾರಿಗಳಿಗೆ ಸನ್ಮಾನ" ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಿ, ನಮ್ಮ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಬೇಕು. ತಮ್ಮ ಮಕ್ಕಳು ಅಧಿಕಾರ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದರೆ, ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕೃಷಿ ಸಚಿವನಾಗಿ ಭೂಮಿತಾಯಿಯ ಅನ್ನದಾತನ ಸೇವೆ ಮಾಡುವ ಅವಕಾಶ ದೊರೆತಿದೆ. ಕೃಷಿ ಇಲಾಖೆಯಲ್ಲಿ ಮಹತ್ತರ ಬದಲಾವಣೆ ತರಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ನಮಗೆ ವೀಕೆಂಡ್ ಪಬ್ ಕಲ್ಚರ್ ಬೇಡ, ವೀಕೆಂಡ್ ಅಗ್ರಿಕಲ್ಚರ್ ಸಂಸ್ಕೃತಿ ನಮ್ಮದಾಗಬೇಕು. ಶಾಲಾ ಮಕ್ಕಳಿಗೆ ಅಗ್ರಿ ಟೂರಿಸಂ ಮೂಲಕ ಕೃಷಿ ಬಗ್ಗೆ ಶಾಲಾದಿನಗಳಲ್ಲಿ ಅರಿವು ಮೂಡಿಸುವ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆ ಚರ್ಚಿಸಿದ್ದೇನೆ ಎಂದರು.
ಇದೇ ವೇಳೆ, ವೀರಶೈವ ಅಭಿವೃದ್ಧಿ ನಿಗಮಕ್ಕೆ ಪರಮಶಿವಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಸಿಎಂ ತಮ್ಮನ್ನು ಸೇರಿದಂತೆ ಸುತ್ತೂರು ಶ್ರೀಗಳು ಹಾಗೂ ಸಮುದಾಯದ ಇತರ ಸಚಿವರ ಜೊತೆಗೆ ಚರ್ಚಿಸಿ, ನೇಮಕ ಮಾಡಿದರು ಎಂದು ಸ್ಮರಿಸಿದರು.