ಕೊರೊನಾ ವಾರಿಯರ್ಸ್ಗೆ ಬಹಳಷ್ಟು ಕಡೆ ಸಾರ್ವಜನಿಕರು , ಸಂಘಸಂಸ್ಥೆಗಳು ಗೌರವ ಸಲ್ಲಿಸುತ್ತಾ ಬಂದಿದ್ದಾರೆ. ಇದೀಗ ರೋಟರಿ ಸಹಯೋಗದಲ್ಲಿ ಅಖಂಡ ಭಾರತ ತಂಡ ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸಿದ್ದಾರೆ.
ರಾಜಾಜಿನಗರದ ರಾಮಮಂದಿರ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸ್ ಇಲಾಖೆ ಹಾಗೂ ಮಾಧ್ಯಮದವರ ಮೇಲೆ ಹೂ ಮಳೆ ಸುರಿಸಿ ವೇದಿಕೆಗೆ ಸ್ವಾಗತಿಸುವ ಮೂಲಕ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸಿದರು. ಅಲ್ಲದೆ ಇದೇ ವೇಳೆ ಲಾಕ್ಡೌನ್ನಿಂದ ಕೆಲಸ ಇಲ್ಲದೆ ಸಂಕಷ್ಟದಲ್ಲಿರುವ ಸುಮಾರು 250 ಕ್ಕೂ ಹೆಚ್ಚು ಪೊಷಕ ಕಲಾವಿದರು ಹಾಗೂ ಸಹಾಯಕ ನಿರ್ದೇಶಕರಿಗೆ ಅಖಂಡ ಭಾರತ ತಂಡ ಅಗತ್ಯ ದಿನಸಿ ಕಿಟ್ಗಳನ್ನು ನೀಡಿದರು.
ಇದೇ ವೇಳೆ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆಯಲಾಯಿತು. ಕಲಿಯುಗ ಕರ್ಣ ಅಂಬರೀಶ್ ಅವರು ಇಂದು ಬದುಕಿದ್ದಿದ್ದರೆ ಚಿತ್ರರಂಗದ ಕಾರ್ಮಿಕರು, ಪೋಷಕ ಕಲಾವಿದರಿಗೆ ಇಂತ ಪರಿಸ್ಥಿತಿ ಬರುತ್ತಿರಲಿಲ್ಲ. ಇಂದು ಚಿತ್ರರಂಗದಲ್ಲಿ ಕೇವಲ ಕಟ್ಟಡ ಮಾತ್ರ ಇದೆ, ಆದರೆ ತಳಹದಿ ಕಾಣುತ್ತಿಲ್ಲ. ಕಷ್ಟದಲ್ಲಿರುವ ಸಿನಿಕಾರ್ಮಿಕರಿಗೆ ಪೋಷಕ ಕಲಾವಿದರಿಗೆ ಚಿತ್ರರಂಗದಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂದು ಸಿನಿ ಕಾರ್ಮಿಕರು ಹಾಗೂ ಪೋಷಕ ಕಲಾವಿದರು ಅಖಂಡ ಭಾರತ ಸದಸ್ಯರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.