ಬೆಂಗಳೂರು: ನಗರದ ಟ್ರಾಫಿಕ್ ಸವಾಲುಗಳನ್ನು ನಿಭಾಯಿಸಲು 100 ಕೋಟಿ ರೂಪಾಯಿ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆಯ(ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್ ಹಾಗೂ ಕ್ಯಾಮರಾಗಳನ್ನು ಅಳವಡಿಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
'ರಸ್ತೆ ಸುರಕ್ಷೆ ಜೀವನ ರಕ್ಷೆ' ಎಂಬ ಸಂದೇಶದೊಂದಿಗೆ ನಗರದ ಟೌನ್ಹಾಲ್ನಲ್ಲಿ ನಡೆದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಬೆಳೆಯುತ್ತಿರುವ ಆರ್ಥಿಕತೆ ಹಲವಾರು ಸವಾಲು ತರುತ್ತದೆ. ಅದರಲ್ಲಿ ವಲಸೆಯ ಸ್ಥಿತಿ ನಗರೀಕರಣಕ್ಕೆ ಕಾರಣವಾಗುತ್ತದೆ. ಶೇ. 40ರಷ್ಟು ನಗರೀಕರಣವಾಗಿದ್ದು, ಟ್ರಾಫಿಕ್ ಸವಾಲು ಕೂಡಾ ಎದುರಾಗಿದೆ. ಸಂಚಾರ ಜೀವನದ ಒಂದು ಭಾಗ. ಟ್ರಾಫಿಕ್ ಸಂಸ್ಕೃತಿಯನ್ನು (ಟ್ರಾಫಿಕ್ ಕಲ್ಚರ್) ಉಲ್ಲಂಘಿಸುವ ಸಂಸ್ಕೃತಿಯಿಂದ ಟ್ರಾಫಿಕ್ ನಿಯಮ ಪಾಲಿಸುವ ಸಂಸ್ಕೃತಿಗೆ ಬದಲಾಯಿಸಬೇಕಿದೆ ಎಂದರು.
ನಗರದಲ್ಲಿ ಈಗಾಗಲೇ ಒಂದು ಕಾಲು ಕೋಟಿ ಜನಸಂಖ್ಯೆಗೆ 85 ಲಕ್ಷ ವಾಹನಗಳಿವೆ. ಇದು ಜನಸಂಖ್ಯೆಯನ್ನೂ ಮೀರಿ ಬೆಳೆಯುವ ಸಾಧ್ಯತೆ ಇದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇರುವ ಸಿಗ್ನಲ್ಸ್, ಕ್ಯಾಮರಾಗಳು ಇವೆ. ಟ್ರಾಫಿಕ್ ಉಲ್ಲಂಘಿಸುವ ವಾಹನಗಳ ನಂಬರ್ ಪ್ಲೇಟ್ ಗುರುತು ಹಿಡಿಯುವ ಕ್ಯಾಮರಾಗಳೂ ಬಂದಿವೆ. ಹೀಗಾಗಿ, 100 ಕೋಟಿ ರೂಪಾಯಿಯಲ್ಲಿ ಆಧುನಿಕ ಕ್ಯಾಮರಾ, ಸಿಗ್ನಲ್ಗಳು ನಗರದಲ್ಲಿ ಶೀಘ್ರದಲ್ಲಿ ಕೆಲಸ ಆರಂಭಿಸಲಿವೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಅಲ್ಲದೆ, 12 ಹೈಡೆನ್ಸಿಟಿ ಕಾರಿಡಾರ್ಗಳಲ್ಲಿ (ಹೆಚ್ಚು ಟ್ರಾಫಿಕ್ ಇರುವ ರಸ್ತೆ) 470 ಕೋಟಿ ರೂಪಾಯಿಯಲ್ಲಿ ರಸ್ತೆ ಅಗಲೀಕರಣಕ್ಕೆ ಸರ್ಕಾರ ಬಿಡುಗಡೆ ಮಾಡಿದೆ. ಬಿಬಿಎಂಪಿ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಅಥಾರಿಟಿಯನ್ನು ಸದ್ಯದಲ್ಲೇ ರಚಿಸಲಾಗುತ್ತದೆ. ಸೆಂಟ್ರಲ್ ಬೆಂಗಳೂರು ಡಿಸ್ಟ್ರಿಕ್ಟ್ (ಸಿಬಿಡಿ ಏರಿಯಾ) ಅನ್ನು ಸಂಪೂರ್ಣವಾಗಿ ಅಧುನೀಕರಣ ಮಾಡಲು 30 ಕೋಟಿ ಮಂಜೂರು ಮಾಡಲಾಗಿದೆ. ಒಂದು ವರ್ಷದ ಒಳಗೆ ಈ ಎಲ್ಲಾ ಕೆಲಸಗಳು ಮುಗಿಯಲಿವೆ. ಅಷ್ಟರಲ್ಲಿ ನಗರದಲ್ಲಿ ಆಧುನಿಕ ವ್ಯವಸ್ಥೆಯ ಟ್ರಾಫಿಕ್ ನಿರ್ವಹಣೆ ಬರಲಿವೆ. ಪೊಲೀಸ್ ಸಿಬ್ಬಂದಿಯ ರಕ್ಷಣೆ, ಆರೋಗ್ಯ ವ್ಯವಸ್ಥೆಯೂ ಬಹಳ ಮುಖ್ಯ. ಇದಕ್ಕೂ ಕ್ರಮ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಸಂಗ್ರಹಿಸುವ ಟ್ರಾಫಿಕ್ ದಂಡದಲ್ಲಿ ನೂರಕ್ಕೆ ನೂರನ್ನು ಟ್ರಾಫಿಕ್ ಅಭಿವೃದ್ಧಿಗೆ ಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸದ್ಯ ಶೇ. 50ರಷ್ಟು ಕೊಡಲು ಒಪ್ಪಿಗೆ ಸೂಚಿಸಿದೆ ಎಂದರು.
ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ಭಾರತೀಯ ರಸ್ತೆಗಳಲ್ಲಿ ಪ್ರತಿದಿನ 1 ಲಕ್ಷದ 60 ಸಾವಿರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತೀ ನಾಲ್ಕು ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿದೆ. ರಸ್ತೆ ಅಪಘಾತಗಳಲ್ಲಿ ಯುವಕರದ್ದೇ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಹೀಗಾಗಿ, ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲದ ನಿರ್ದೇಶನದಂತೆ ಕಳೆದ ಬಾರಿ ಸಪ್ತಾಹದ ರೀತಿಯಲ್ಲಿ ಆಚರಿಸಲಾಗಿತ್ತು. ಈ ಬಾರಿ ರಸ್ತೆ ಸುರಕ್ಷತಾ ಮಾಸಾಚರಣೆ ಆಚರಿಸಲಾಗುತ್ತಿದೆ. ಬೀದಿ ನಾಟಕ, ಕಾಲೇಜುಗಳಿಗೆ ಆನ್ಲೈನ್ ಕ್ಲಾಸ್ , ಚಲನಚಿತ್ರದ ಮೂಲಕಗಳ ಜನಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಡಿಸಿಎಂ ಅಶ್ವತ್ಥ್ನಾರಾಯಣ, ರಸ್ತೆ ಸುರಕ್ಷತೆ ಬಗ್ಗೆ ಸಾಕಷ್ಟು ಸವಾಲುಗಳಿವೆ. ಎಷ್ಟು ಜಾಗೃತಿ ಮೂಡಿಸಿದರೂ ಸಾಲುವುದಿಲ್ಲ. ಎಷ್ಟೇ ಸೈನ್ ಬೋರ್ಡ್ ಇದ್ದರೂ ಮುಂದುವರಿದ ರಾಷ್ಟ್ರಗಳಲ್ಲೂ ಹಗುರುವಾಗಿ ತೆಗೆದುಕೊಳ್ಳುವ ಕಾರಣ ರಸ್ತೆ ಅಪಘಾತಗಳು ಸಂಭವಿಸುತ್ತವೆ. ನಗರದಲ್ಲಿ ಫುಟ್ ಪಾತ್ಗಳನ್ನು ಜನರ ಬಳಕೆಗಾಗಿ ಅವಕಾಶ ಮಾಡಿಕೊಡಬೇಕು. ಇದನ್ನು ಸುಸಜ್ಜಿತವಾಗಿ ಮಾಡಬೇಕು. ಫುಟ್ ಪಾತ್ಗಳ ಒತ್ತುವರಿ ತೆರವು ಮಾಡಬೇಕು. ಗೃಹ ಇಲಾಖೆಯೂ ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ವಾಹನಗಳು ಸಿಗ್ನಲ್ ಉಲ್ಲಂಘಿಸಿ ಮುಂದೆ ಹೋದರೆ, ಟ್ರಾಫಿಕ್ ಪೊಲೀಸರು ಜೀವದ ಭಯಬಿಟ್ಟು ವಾಹನಗಳನ್ನು ಹಿಡಿಯಲು ಓಡುತ್ತಾರೆ. ಅದರ ಬದಲು ಅತ್ಯಾಧುನಿಕ ಕ್ಯಾಮರಾ ಅಳವಡಿಸಿ ಎಂದು ಸಲಹೆ ನೀಡಿದರು.