ಬೆಂಗಳೂರು: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ರಾಜೀನಾಮೆ ಸಂಬಂಧ ನಿರ್ಧಾರ ಕೈಗೊಳ್ಳುವ ಅಧಿಕಾರ ಸಿಎಂ ಉದ್ಧವ್ ಠಾಕ್ರೆ ಅವರ ವಿವೇಚನೆಗೆ ಬಿಡಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಶೋಕ್ ಚವ್ಹಾಣ್ ಹಾಗೂ ಬಾಳಾ ಸಾಹೇಬ್ ತೋರಟ್ ಅವರು ಕೋರ್ ಕಮಿಟಿ ಸದಸ್ಯರ ಜೊತೆ ನಿನ್ನೆ ಸಭೆ ನಡೆಸಿ ಸಮಾಲೋಚಿಸಿದ್ದಾರೆ. ಬಾಳಾ ಸಾಹೇಬ್ ತೋರಾಟ್ ಹಾಗೂ ಅಶೋಕ್ ಚವ್ಹಾಣ್ ಸಿಎಂ ಭೇಟಿ ಮಾಡಲಿದ್ದಾರೆ. ಅಂತಿಮ ನಿರ್ಧಾರ ಮಹಾರಾಷ್ಟ್ರದ ಸಿಎಂಗೆ ಬಿಟ್ಟಿದ್ದು ಎಂದು ಎನ್‌ಸಿಪಿ ಹೇಳಿದೆ. ಶರದ್ ಪವಾರ್ ಕೂಡ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಸಿಎಂ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಮಹಾರಾಷ್ಟ್ರದಲ್ಲಿ ನಡೆದ ಕೆಲ ಬೆಳವಣಿಗೆಗಳನ್ನು ಹೈಕಮಾಂಡ್ಗೆ ವಿವರಿಸಿದ್ದೇನೆ. ನಾನೂ ಸಭೆ ನಡೆಸಿ ಮಹಾರಾಷ್ಟ್ರದ ರಾಜಕೀಯ ವಿದ್ಯಮಾನದ ಮಾಹಿತಿ ಪಡೆದಿದ್ದೇನೆ. ಮಹಾರಾಷ್ಟ್ರ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಬರೆದಿರುವ ಪತ್ರದ ಕುರಿತು ನಿಷ್ಪಕ್ಷಪಾತ ತನಿಖೆ ಆಗಬೇಕೆಂದು ಖುದ್ದು ಅನಿಲ್ ದೇಶಮುಖ್ ಅವರೇ ತಿಳಿಸಿದ್ದಾರೆ. ಸಿಎಂಗೂ ಪತ್ರ ಬರೆದಿದ್ದಾರೆ ಎಂದರು.
ಇನ್ನು ಶರದ್ ಪವಾರ್ ನೀಡಿದ ಹೇಳಿಕೆಯ ಕುರಿತು ಎನ್‌ಸಿಪಿ ಚರ್ಚಿಸುತ್ತೇವೆ ಎಂದಿದ್ದಾರೆ. ನಮ್ಮ ಪಕ್ಷದ ಮುಖ್ಯಸ್ಥರೂ ಸಹ ಇಂದು ಸಂಜೆ ಸಿಎಂ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದಾರೆ. ಸಿಎಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.