ಬೆಂಗಳೂರು: ಸಗಟು ಡೀಸೆಲ್ ಖರೀದಿ ದರ ಏರಿಕೆಯಾಗಿರುವುದರಿಂದ ಮೊದಲೇ ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳಿಗೆ ಇನ್ನಷ್ಟು ಬಿಕ್ಕಟ್ಟು ಎದುರಾಗಿದೆ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ದಿನಕ್ಕೆ 2.17 ಕೋಟಿ ಹೆಚ್ಚುವರಿ ಹೊರೆ ಆಗಲಿದೆ ಎನ್ನಲಾಗುತ್ತಿದೆ.
ನಿತ್ಯ ಕೆಎಸ್‌ಆರ್‌ಟಿಸಿಗೆ 5.30 ಲಕ್ಷ ಲೀಟರ್, ಬಿಎಂಟಿಸಿಗೆ 2.06 ಲಕ್ಷ ಲೀಟರ್, ಎನ್‌ಡಬ್ಲ್ಯುಕೆಆರ್‌ಟಿಸಿಗೆ 2.82 ಲಕ್ಷ ಲೀಟರ್ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 2.50 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತದೆ ಎಂದು ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿಗೆ ನಿತ್ಯ 5 ಕೋಟಿ ರೂಪಾಯಿ ಖರ್ಚಾಗುತ್ತಿತ್ತು. ಈಗ ಹೆಚ್ಚುವರಿಯಾಗಿ 86.60 ಲಕ್ಷ ಹೊರೆ ಆಗಿದೆ. ಬಿಎಂಟಿಸಿ ಡೀಸೆಲ್‌ಗೆ 2.10 ಕೋಟಿ ಖರ್ಚು ಮಾಡುತ್ತಿತ್ತು. ಈಗ 35 ಲಕ್ಷ ಹೆಚ್ಚುವರಿಯಾಗಿ ಸೇರಿಕೊಂಡಿದೆ. ಎನ್‌ಡಬ್ಲ್ಯುಕೆಆರ್‌ಟಿಸಿ ಗೆ 48.97 ಲಕ್ಷ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 43.41 ಲಕ್ಷ ಹೆಚ್ಚುವರಿ ಡೀಸೆಲ್ ವೆಚ್ಚದ ಹೊರೆ ಬೀಳಲಿದೆ ಎಂದು ಹೇಳಿದ್ದಾರೆ.
ಈ ನಷ್ಟದಿಂದ ಪಾರು ಮಾಡಲು ಕೋರಿ ನಾಲ್ಕೂ ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ, ಮುಂದೆ ಚುನಾವಣೆ ಇರುವುದರಿಂದ ಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆಯಿದೆ.
ನೆರವಿಗೆ ಸರ್ಕಾರದ ಮೊರೆ: ಡೀಸೆಲ್ ಖರೀದಿ ದರದ ಹೊರೆ ಸಾರಿಗೆ ಸಂಸ್ಥೆಗಳಿಗೆ ಹೆಚ್ಚಾಗಿದೆ. ನೆರವು ನೀಡಬೇಕು ಎಂದು ಸರ್ಕಾರಕ್ಕೆ ಕೇಳಿದ್ದೇವೆ. ಸರ್ಕಾರದ ಮಟ್ಟದಲ್ಲಿ ಕೋರಿಕೆ ಪರಿಶೀಲನೆ ಹಂತದಲ್ಲಿದೆ. ಟಿಕೆಟ್ ದರ ಹೆಚ್ಚಳ ಮಾಡುವ ಆಲೋಚನೆ ಇಲ್ಲ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಸ್ಪಷ್ಟಪಡಿಸಿದ್ದಾರೆ.