ಬೆಂಗಳೂರು: ನೀವೇನಾದರೂ ಬಸ್, ಮೆಟ್ರೋ, ಕ್ಯಾಬ್ ಬಿಟ್ಟು ಆಟೋದಲ್ಲಿ ಓಡಾಡ್ತೀರಾ..? ಹಾಗಾದರೆ ನಾಳೆಯಿಂದ ಆಟೋ ಪ್ರಯಾಣ ದರ ಕನಿಷ್ಠ 25 ರೂಪಾಯಿ ಇರೋಲ್ಲ. ಬದಲಿಗೆ ಪರಿಷ್ಕೃತ ದರ ಜಾರಿಯಾಗಲಿದೆ. ಕನಿಷ್ಠ ದರ ನಾಳೆಯಿಂದ ಮೊದಲ 2 ಕಿಲೋಮೀಟರ್ಗೆ 30 ರೂಪಾಯಿ ನೀಡಬೇಕಿದೆ. ನಂತರ ಪ್ರತಿ ಕಿಲೋ ಮೀಟರ್ಗೆ 15 ರೂ. ದರ ನಿಗದಿಯಾಗಿದೆ.
ಗ್ಯಾಸ್ ದರ ಹೆಚ್ಚಳ ಬೆನ್ನಲ್ಲೇ ಆಟೋ ದರ ಪರಿಷ್ಕರಣೆಗೆ ಆಟೋ ಚಾಲಕರು ಪಟ್ಟು ಹಿಡಿದಿದ್ದರು. ಈ ಮೊದಲು ಕನಿಷ್ಠ 2 ಕಿಲೋ ಮೀಟರ್ಗೆ ಪ್ರಯಾಣ ದರ 25 ರೂಪಾಯಿ ಇತ್ತು. ಇದೀಗ ಆಟೋ ಪ್ರಯಾಣದ ಕನಿಷ್ಠ ದರವನ್ನು 5 ರೂಪಾಯಿ ಏರಿಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಆಟೋ ದರ ಪರಿಷ್ಕರಣೆ ಮಾಡಿ ಹೊಸ ಆದೇಶ ಹೊರಡಿಸಿದ್ದು, ಬರೋಬ್ಬರಿ 8 ವರ್ಷದ ಬಳಿಕ ಆಟೋ ದರ ಪರಿಷ್ಕರಣೆ ಮಾಡಲಾಗಿದೆ. ಪ್ರಸುತ್ತ ಹೊಸ ಪರಿಷ್ಕರಣೆ ದರವೂ ಡಿಸೆಂಬರ್ 1ರಿಂದ ಅಂದರೆ ನಾಳೆಯಿಂದಲ್ಲೇ ಅನ್ವಯವಾಗಲಿದೆ.
ಚಾಲಕರ ಮನವಿಗೆ ಸರ್ಕಾರದಿಂದ ಅಸ್ತು: ಆಟೋ ಚಾಲಕರ ಮನವಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ರಾಜ್ಯ ಸಾರಿಗೆ ಇಲಾಖೆ ಮಣಿದಿದೆ. ಆಟೋ ದರ ಏರಿಕೆಗೆ ಮನಸು ಮಾಡಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ, ಆಟೋ ಯೂನಿಯನ್ ಜೊತೆಗೆ ಸಭೆಯನ್ನು ನಡೆಸಿದ್ದರು. ಸದ್ಯ ಬೆಂಗಳೂರು ನಗರದಲ್ಲಿ ಒಂದು ಕಿ.ಮೀಗೆ 13 ರೂಪಾಯಿ, ಮಿನಿಮಮ್ ಚಾರ್ಜ್ 25 ರೂ. ನಿಗದಿಯಾಗಿತ್ತು. ಸಂಘಟನೆಗಳು ಕಿ.ಮೀಗೆ 15 ರಿಂದ 16 ರುಪಾಯಿ ಹಾಗೂ ಕನಿಷ್ಠ 30 ರೂ. ಮಾಡುವಂತೆ ಪಟ್ಟು ಹಿಡಿದಿದ್ದರು. ಸದ್ಯ, ಜಿಲ್ಲಾಧಿಕಾರಿ ದರ ಏರಿಕೆಗೆ ಸಮ್ಮತಿಸಿದ್ದು ಅಂತಿಮ ದರವನ್ನ ನಿಗದಿ ಮಾಡಿದೆ.
2013ರಲ್ಲಿ ಆಟೋ ಮೀಟರ್ ದರ ಹೆಚ್ಚಳ: ಅಂದಹಾಗೇ, 2013ರಲ್ಲಿ ಕೊನೆಯದಾಗಿ ಆಟೋ ಮೀಟರ್ ದರ ಹೆಚ್ಚಳವಾಗಿತ್ತು. ಸದ್ಯ ಆಟೋ ಗ್ಯಾಸ್ ದರ ಏರಿಕೆಯಾಗಿದೆ. ಹೀಗಾಗಿ ಮೀಟರ್ ಹಾಕಿ ಬಾಡಿಗೆ ಓಡಿಸೋದು ಕಷ್ಟ ಆಗ್ತಿದೆ. ಈ ಕಾರಣದಿಂದ ದರ ಏರಿಕೆ ಅನಿವಾರ್ಯ ಎಂದು ಆಟೋ ಯೂನಿಯನ್ಗಳು ಪಟ್ಟು ಹಿಡಿದಿದ್ದು, ಇದೀಗ ಅವರ ಬೇಡಿಕೆಗೆ ಸರ್ಕಾರ ಮಣಿದಿದೆ.
ಇದನ್ನೂ ಓದಿ: ಹೆಬ್ಬಾಳ್ಕರ್ ಗೆ ಥೂ.. ಥೂ.. ಎಂದ ರಮೇಶ್ ಜಾರಕಿಹೊಳಿ ವರ್ತನೆಗೆ ಡಿಕೆಶಿ ಏನಂದ್ರು?