ಬೆಂಗಳೂರು: ಇಂಜಿನಿಯರಿಂಗ್ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಕಾಲೇಜಿಗೆ ಜಡಿದಿದ್ದ ಬೀಗ ತೆರೆಯುಂತೆ ಸೂಚಿಸಿದ್ದರೂ ನ್ಯಾಯಾಲಯದ ಆದೇಶ ಪಾಲಿಸದ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ನಗರದ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಿ ನರೇಂದರ್ ಅವರಿದ್ದ ಪೀಠ, ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವಂತೆ ಕಾಲೇಜಿಗೆ ಬೀಗ ಹಾಕಿದ್ದು ಎಷ್ಟು ಸರಿ? ಬೀಗ ತೆರೆಯುವಂತೆ ನ್ಯಾಯಾಲಯ ಸೂಚಿಸಿದ್ದರೂ ಏಕೆ ತೆಗೆದಿಲ್ಲ? ನಿಮ್ಮ ಮಕ್ಕಳು ಓದುತ್ತಿದ್ದರೆ ಈ ರೀತಿ ಬೀಗ ಹಾಕತ್ತಿದ್ದರಾ? ಕರ್ನಾಟಕವನ್ನು ಉತ್ತರ ಮಾಡಲು ಹೊರಟಿದ್ದೀರಾ?
ನಗರದಲ್ಲಿ ಕೊರೊನಾ ಮಿತಿ ಮೀರಿದೆ. ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಪರೀಕ್ಷೆ ನಡೆಯುತ್ತಿರುವ ಕಾಲೇಜಿಗೆ ತೆರಳಿ ಹಾಕಿ ಬೀಗ ಹಾಕಿದ್ದೇಕೆ? ಯಾವ ಎಂಎಲ್ಎ ಅಥವಾ ರಾಜಕಾರಣಿಯನ್ನು ಖುಷಿಪಡಿಸಲು ಇಂತಹ ಕೆಲಸ ಮಾಡುತ್ತಿದ್ದೀರಾ? ನೀವೆಲ್ಲಾ ನಿಜಕ್ಕೂ ಓದಿ ಅಧಿಕಾರಿಗಳಾಗಿದ್ದೀರಾ? ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹಾಗೆಯೇ ನೀವು ಎಸಗಿರುವ ಕೃತ್ಯಕ್ಕೆ ವಿವರಣೆ ನೀಡಿ ವೈಯಕ್ತಿಕ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶಿವಪ್ಪ ಲಮಾಣಿ ಅವರಿಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ : ನಗರದ ದಕ್ಷಿಣ ತಾಲೂಕು ಬೇಗೂರು ಹೋಬಳಿ ವ್ಯಾಪ್ತಿಯ ಹುಳಿಮಾವು ಗ್ರಾಮದ ಸರ್ವೆ ನಂಬರ್ 63ರಲ್ಲಿ 5 ಎಕರೆ ಭೂಮಿಯಿದ್ದು, ಈ ಜಾಗದಲ್ಲಿ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವಿಟಿಯು ಅನುಮೋದನೆಯೊಂದಿಗೆ ಎಂಜಿನಿಯರಿಂಗ್ ಶಿಕ್ಷಣ ನೀಡುತ್ತಿದೆ. ಕಳೆದ 40 ವರ್ಷಗಳಿಂದ ಇಲ್ಲಿ ಕಾಲೇಜು ನಡೆಯುತ್ತಿದ್ದರೂ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಕಾಲೇಜು ಆಡಳಿತ ಮಂಡಳಿ ನಡುವೆ ವಿವಾದವಿದೆ.
ಸೆಪ್ಟೆಂಬರ್ ತಿಂಗಳಲ್ಲಿ ವಿಟಿಯು ನಿಗದಿಪಡಿಸಿರುವ ಪರೀಕ್ಷೆಗಳು ನಡೆಯುತ್ತಿದ್ದು, ಕಾಲೇಜಿನ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಸೆಪ್ಟೆಂಬರ್ 15ರಂದು ದಕ್ಷಿಣ ವಿಭಾಗದ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಾಲೇಜಿಗೆ ತೆರಳಿ ಬೀಗ ಜಡಿದಿದ್ದಾರೆ. ಈ ಕುರಿತು ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಬೀಗ ತೆರೆಯಲು ಕೋರಿದೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಬೀಗ ತೆರೆಯಲು ಸೂಚಿಸಿದ್ದರೂ ಅಧಿಕಾರಿಗಳು ಆದೇಶ ಪಾಲಿಸಿಲ್ಲ.