ಬೆಂಗಳೂರು : ಹೆದ್ದಾರಿಯ ಟೋಲ್ಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫೆ.15ರಿಂದ ಜಾರಿಗೊಳಿಸಿರುವ ಫಾಸ್ಟ್ ಟ್ಯಾಗ್ ಕಡ್ಡಾಯ ನಿಯಮವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ಗಳಲ್ಲಿ ಶುಲ್ಕ ಸಂಗ್ರಹಿಸುವುದನ್ನು ಪ್ರಶ್ನಿಸಿ ಬೆಂಗಳೂರಿನ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ಭದ್ರಾವತಿ ಶಾಸಕ ಸಂಗಮೇಶ್ ವಿರುದ್ಧ ಮುತಾಲಿಕ್ ಕಿಡಿ
ಈ ವೇಳೆ ಫಾಸ್ಟ್ ಟ್ಯಾಗ್ ರದ್ದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ವಾದ ಆಲಿಸಿದ ಪೀಠ, ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಫಾಸ್ಟ್ ಟ್ಯಾಗ್ ಉತ್ತಮ. ದಿನಕ್ಕೆ ನೂರಾರು ಜನ ಮುಟ್ಟುವ ನೋಟುಗಳನ್ನು ನಿರ್ವಹಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟಿತು.
ಅರ್ಜಿದಾರರು ಮೂಲ ಅರ್ಜಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯಿದೆ(ಎನ್ಎಚ್ಎಐ) ಸೆಕ್ಷನ್ 8(ಎ) ಮತ್ತು ರಾಷ್ಟ್ರೀಯ ಹೆದ್ದಾರಿ ಶುಲ್ಕ (ನಿಗದಿ ಮತ್ತು ಸಂಗ್ರಹ) ನಿಯಮ 3ನ್ನು ಪ್ರಶ್ನಿಸಿದ್ದಾರೆ. ಮತ್ತೆ ಮಧ್ಯಂತರ ಅರ್ಜಿ ಸಲ್ಲಿಸಿ ಫಾಸ್ಟ್ ಟ್ಯಾಗ್ಗೆ ತಡೆ ಕೋರಿರುವುದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಮಧ್ಯಂತರ ಮನವಿ ವಜಾ ಮಾಡಿತು.