ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರ ಚುನಾವಣೆಗೆ ತಡೆ ನೀಡಿದ ಹೈಕೋರ್ಟ್ - ವಕ್ಫ್ ಮಂಡಳಿ ಅಧ್ಯಕ್ಷರ ಚುನಾವಣೆಗೆ ತಡೆ ನೀಡಿದ ಹೈಕೋರ್ಟ್
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರ ಆಯ್ಕೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜೊತೆಗೆ ರಾಜ್ಯ ಸರ್ಕಾರ, ರಾಜ್ಯ ವಕ್ಫ್ ಮಂಡಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.
![ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರ ಚುನಾವಣೆಗೆ ತಡೆ ನೀಡಿದ ಹೈಕೋರ್ಟ್ waqf](https://etvbharatimages.akamaized.net/etvbharat/prod-images/768-512-13427563-thumbnail-3x2-hc.jpg?imwidth=3840)
ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರ ಆಯ್ಕೆಗೆ ನಡೆಯಬೇಕಿದ್ದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ವಕ್ಫ್ ಮಂಡಳಿ ಅಧ್ಯಕ್ಷರ ಚುನಾವಣೆಗೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ವಕ್ಫ್ ರಕ್ಷಣಾ ಜಂಟಿ ಕ್ರಿಯಾ ಸಮಿತಿ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ಪೀಠ, ಅಧ್ಯಕ್ಷರ ಚುನಾವಣೆಗೆ ಮಧ್ಯಂತರ ತಡೆ ನೀಡುವ ಜೊತೆಗೆ ರಾಜ್ಯ ಸರ್ಕಾರ, ರಾಜ್ಯ ವಕ್ಫ್ ಮಂಡಳಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ವಕ್ಫ್ ಕಾಯ್ದೆ ಪ್ರಕಾರ ನಾಮನಿರ್ದೇಶನ ಸದಸ್ಯರಿಗಿಂತ ಚುನಾಯಿತ ಸದಸ್ಯರ ಸಂಖ್ಯೆ ಹೆಚ್ಚಿರಬೇಕು. ಆದರೆ, ಸದ್ಯ ಮಂಡಳಿಯಲ್ಲಿ ನಾಮನಿರ್ದೇಶನ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಬೇಕಾದರೆ ಮಂಡಳಿ ಪರಿಪೂರ್ಣವಾಗಿ ರಚನೆಗೊಂಡಿರಬೇಕು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಸ್ಥಾನದ ಚುನಾವಣೆಗೆ ಹೊರಡಿಸಲಾಗಿರುವ ಅಧಿಸೂಚನೆ ರದ್ದುಪಡಿಸಬೇಕು ಮತ್ತು ಚುನಾವಣೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.