ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳವೇ 'ಕಲೆಕ್ಷನ್ ಸೆಂಟರ್' ಆಗಿದೆ. ಅಲ್ಲಿ ಭ್ರಷ್ಟಾಚಾರದ ದಂಧೆ ನಡೆಯುತ್ತಿದ್ದು, ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ ಎಂದು ಹೈಕೋರ್ಟ್ ಕಿಡಿಕಾರಿದೆ.
ಭ್ರಷ್ಟಾಚಾರ ತಡೆಯುವ ಕೆಲಸ ಎಸಿಬಿ ಮಾಡುತ್ತಿದೆಯೇ ಎಂದು ಕಟುವಾಗಿ ಪ್ರಶ್ನಿಸಿರುವ ಹೈಕೋರ್ಟ್, ಭ್ರಷ್ಟಾಚಾರ ನಿಗ್ರಹ ದಳವು ಎಷ್ಟು ಪ್ರಕರಣಗಳಲ್ಲಿ ಇಲ್ಲಿಯವರೆಗೆ ದಾಳಿ ನಡೆಸಿದೆ, ಎಷ್ಟು ಪ್ರಕರಣಗಳಲ್ಲಿ ಅಧಿಕಾರಿಗಳ ಬಗ್ಗೆ ಬಿ - ರಿಪೋರ್ಟ್ ಸಲ್ಲಿಸಿದೆ ಎನ್ನುವುದರ ಕುರಿತು ವಸ್ತು ಸ್ಥಿತಿ ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಿದೆ.
ಜಮೀನು ವಿವಾದದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್ ಮಹೇಶ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ಎಸಿಬಿ ಕಾರ್ಯವೈಖರಿ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
ಎಸಿಬಿಯೇ ದೊಡ್ಡ ಭ್ರಷ್ಟರ ಕೂಪವಾಗಿದೆ: ಅದರ ಕಚೇರಿಗಳು ಕಲೆಕ್ಷನ್ ದಂಧೆಯ ಕೇಂದ್ರಗಳಾಗಿವೆ. ಎಸಿಬಿಯಲ್ಲಿ ಕಾರ್ಯನಿರ್ವಹಿಸುವ ಹಿರಿಯ ಅಧಿಕಾರಿಗಳೇ ಕಳಂಕಿತರಾಗಿದ್ದಾರೆ . ದೊಡ್ಡ ಅಧಿಕಾರಿಗಳ ಭ್ರಷ್ಟಾಚಾರ ಬಯಲಿಗೆಳೆಯುವುದನ್ನು ಬಿಟ್ಟು ಸಣ್ಣ ಪುಟ್ಟ ಅಧಿಕಾರಿಗಳು, ಕ್ಲರ್ಕ್ ಗಳಂತವರನ್ನು ಹಿಡಿದು ಕೋರ್ಟ್ಗೆ ಪ್ರಕರಣಗಳನ್ನು ತರಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಎಸಿಬಿಯು 2016ರಿಂದ ಇಲ್ಲಿಯವರೆಗೆ ಎಷ್ಟು ಪ್ರಕರಣಗಳಲ್ಲಿ ದಾಳಿ ನಡೆಸಿದೆ?, ಎಷ್ಟು ಅಧಿಕಾರಿಗಳ ಬಗ್ಗೆ‘ಬಿʼ ರಿಪೋರ್ಟ್ ಸಲ್ಲಿಸಿದೆ? ಎಂಬ ಬಗ್ಗೆ ವರದಿ ನೀಡಿ ಅಂತ ಎಸಿಬಿ ಪರ ವಕೀಲರಿಗೆ ಸೂಚಿಸಿ ಜಾಮೀನು ಮಂಜೂರಾತಿ ಬಗೆಗಿನ ವಿಚಾರಣೆಯನ್ನು ಜುಲೈ ತಿಂಗಳ 4ಕ್ಕೆ ನ್ಯಾಯಾಲಯ ಮುಂದೂಡಿದೆ.
ಜಾಮೀನು ನೀಡುವಂತೆ ಮನವಿ; ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಉಪ ತಹಶೀಲ್ದಾರ್ ಪಿ.ಎಸ್ ಮಹೇಶ್ ಪರ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಅವರು ವಾದ ಮಂಡಿಸಿ, ಪ್ರಕರಣದ ಬಗ್ಗೆ ವಿವರ ನೀಡುತ್ತಾ ಅರ್ಜಿದಾರರಾದ ಆರೋಪಿಗೆ ಜಾಮೀನು ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಸಿಬಿ ಪರ ವಕೀಲರು ಪ್ರಕರಣದ ಬಗ್ಗೆ ವಿವರ ನೀಡಿ ಈ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರನ್ನ ಆರೋಪಿಯನ್ನಾಗಿ ಮಾಡಲಾಗಿದೆ. ಪ್ರಕರಣ ರದ್ದು ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮೊನ್ನೆ ನಡೆದ ವಿಚಾರಣೆ ವೇಳೆ ತನಿಖೆಗೆ ತಡೆ ವಿಧಿಸಲು ಹೈಕೋರ್ಟ್‌ನ ಮತ್ತೊಂದು ಪೀಠವು ನಿರಾಕರಿಸಿದೆ ಎಂದು ತಿಳಿಸಿದರು.
ತನಿಖಾ ವರದಿ ಎಲ್ಲಿ?: ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ಪ್ರಕರಣದ ತನಿಖಾ ವರದಿ ಎಲ್ಲಿದೆ?, ತನಿಖೆ ನಡೆಸಿದ ಬಗ್ಗೆ ಎಸಿಬಿ ಮಾಹಿತಿಯನ್ನು ಕೋರ್ಟ್ ಗೆ ನೀಡಬೇಕು ಎಂದು ಸೂಚಿಸಿದರು. ಎಸಿಬಿಯು ಯಾವ ಉದ್ದೇಶಕ್ಕೆ ರಚನೆಯಾಗಿದೆ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು ಎಸಿಬಿ ಕಚೇರಿಗಳು ಭ್ರಷ್ಟಾಚಾರದ ದಂಧೆಯ ಕೇಂದ್ರಗಳಾಗಿವೆ.
ಕ್ಯಾನ್ಸರ್ನಂತೆ ವ್ಯಾಪಿಸಿರುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ಉನ್ನತ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡದೇ ಕೇವಲ ಕೆಳ ಹಂತದ ಅಧಿಕಾರಿಗಳನ್ನು ಮಾತ್ರ ಆರೋಪಿಗಳನ್ನಾಗಿ ಮಾಡಲಾಗುತ್ತಿದೆ. ಕಿರಿಯ ಅಧಿಕಾರಿಗಳಾದ ಗುಮಾಸ್ತರ ವಿರುದ್ಧ ಪ್ರಕರಣ ದಾಖಲಿಸುವುದಲ್ಲ. ಭ್ರಷ್ಟಾಚಾರ ನಡೆಸುತ್ತಿರುವ ದೊಡ್ಡ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡರು.
ಎಡಿಜಿಪಿಯೇ ಕಳಂಕಿತ ಆರೋಪ: ಎಸಿಬಿಯ ಎಡಿಜಿಪಿಯೇ ಕಳಂಕಿತರಾಗಿದ್ದಾರೆ ಎನ್ನುವ ಆರೋಪವಿದೆ. ಅವರ ವಿರುದ್ಧದ ಪ್ರಕರಣ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಸರ್ಕಾರವು ಉದ್ದೇಶಪೂರ್ವಕವಾಗಿಯೇ ಕಳಂಕಿತ ಪೊಲೀಸ್ ಅಧಿಕಾರಿಗಳನ್ನ ಎಸಿಬಿಗೆ ನೆಮಿಸುತ್ತಿರುವಂತೆ ಕಾಣುತ್ತಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಪ್ರಕರಣದಲ್ಲಿ ಎಸಿಬಿ ಯಾವ ರೀತಿ ವರ್ತಿಸಿದೆ ಎನ್ನುವುದು ನ್ಯಾಯಾಲಯಕ್ಕೆ ಗೊತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ರಕ್ಷಿಸಬೇಡಿ. ದೊಡ್ಡ ಅಧಿಕಾರಿಗಳನ್ನು ರಕ್ಷಿಸಲಾಗುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಉತ್ತಮ ಉದಾಹರಣೆ ಎಂದು ಕೋರ್ಟ್ ತಿಳಿಸಿತು.
ಈ ಪ್ರಕರಣದಲ್ಲಿ ಮೊದಲ ಆರೋಪಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಾಗಿದ್ದಾರೆ. ಎರಡನೇ ಆರೋಪಿ ಗುತ್ತಿಗೆ ನೌಕರ. ಜಿಲ್ಲಾಧಿಕಾರಿಯನ್ನು ಈ ಪ್ರಕರಣದಲ್ಲಿ ಆರೋಪಿಯಾಗಿ ಮಾಡಿರಲಿಲ್ಲ. ಕೋರ್ಟ್ ಜಿಲ್ಲಾಧಿಕಾರಿಯ ವಿರುದ್ಧದ ದಾಖಲೆಗಳನ್ನು ಮನಗಂಡು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ. ಎಸಿಬಿಯು ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡುತ್ತಿದೆಯೇ? ಎಂದು ಖಾರವಾಗಿ ಪ್ರಶ್ನಿಸಿತು.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೆಂಗಳೂರು ನಗರ ಜಿಲ್ಲಾಧಿಗಳ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್ ಮಹೇಶ್ ಅವರು ಬೇಗೂರು ನಿವಾಸಿ ಅಜಂ ಪಾಷಾ ಎನ್ನುವವರಿಂದ 5 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎನ್ನುವ ಆರೋಪ ಪ್ರಕರಣ ಇದಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ, ಮಹೇಶ್ ಅವರನ್ನು ಬಂಧಿಸಿದ್ದು ಜಾಮೀನಿಗಾಗಿ ಅವರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ .
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ನಿಂದಿಸಿದರಷ್ಟೇ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ: ಹೈಕೋರ್ಟ್