ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ವಿಸ್ತರಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಕಾನೂನು ಬದ್ಧವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರಕರಣದ ಆರೋಪಿಗಳು ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಕರಣಗಳ ವಿಶೇಷ ನ್ಯಾಯಾಲಯ ಆರೋಪಿಗಳ ವಿರುದ್ಧ ದೋಷಾರೋಪಣೆ ಸಲ್ಲಿಸುವ ಅವಧಿ ವಿಸ್ತರಿಸಿ ಹೊರಡಿಸಿರುವ ಆದೇಶ ಸರಿ ಇದೆ.
ಆದ್ದರಿಂದ ಮೇಲ್ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಹಾಗೆಯೇ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಆದರೆ ಮೇಲ್ಮನವಿಯನ್ನು ರಿಟ್ ಅರ್ಜಿಯಾಗಿ ಪರಿವರ್ತಿಸಿಕೊಳ್ಳುವುದಾಗಿ ಮೇಲ್ಮನವಿದಾರರ ಪರ ವಕೀಲರು ಕೇಳಿಕೊಂಡಿದ್ದಾರೆ. ಹಾಗಾಗಿ ಅರ್ಜಿ ಮಾರ್ಪಡಿಸಿ ಸಲ್ಲಿಸಲು 6 ವಾರ ಕಾಲಾವಕಾಶ ನೀಡುವುದಾಗಿ ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅನೀಸ್ ಅಲಿ ಖಾನ್ ವಾದಿಸಿ, ಮೇಲ್ಮನವಿದಾರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಅವಧಿ (ಡಿಟೆನ್ಷನ್ ಅವಧಿ)ಯನ್ನು ವಿಸ್ತರಿಸುವಾಗ ಎನ್‌ಐಎ ವಿಶೇಷ ನ್ಯಾಯಾಲಯ ಮೇಲ್ಮನವಿದಾರರಿಗೆ ನೋಟಿಸ್ ನೀಡಿಲ್ಲ ಮತ್ತು ವಾದ ಆಲಿಸಿಲ್ಲ. ಮೊದಲ 90 ದಿನಗಳ ಬಳಿಕ 10-15 ದಿನಗಳ ಕಾಲ ವಿಸ್ತರಣೆ ಮಾಡಿದ್ದರೆ, ಅದನ್ನು ಮಧ್ಯಂತರ ಆದೇಶ ಎಂದು ಹೇಳಬಹುದಿತ್ತು.
ಆದರೆ, ಪೂರ್ಣ 90 ದಿನಗಳಿಗೆ ಹೆಚ್ಚುವರಿ ವಿಸ್ತರಣೆ ನೀಡಲಾಗಿದೆ. ಹಾಗಾಗಿ, ವಿಶೇಷ ನ್ಯಾಯಾಲಯದ ಆದೇಶವು ‘ಪೂರ್ಣ ಪ್ರಮಾಣದ ತೀರ್ಪು ಆಗುತ್ತದೆ. ಇದರಿಂದ ಅರ್ಜಿದಾರರ ಹಕ್ಕುಗಳನ್ನು ಕಸಿದಂತಾಗುತ್ತದೆ. ಆದ್ದರಿಂದ ಎನ್‌ಐಎ ಮನವಿ ಪರಿಗಣಿಸಿ ಚಾರ್ಜ್‌ಶೀಟ್ ಸಲ್ಲಿಕೆ ಅವಧಿಯನ್ನು ವಿಸ್ತರಿಸಿರುವ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಎನ್‌ಐಎ ಪರ ವಿಶೇಷ ಅಭಿಯೋಜಕ ಪಿ.ಪ್ರಸನ್ನಕುಮಾರ್ ಆಕ್ಷೇಪಿಸಿ, ಜಾರ್ಜ್‌ಶೀಟ್ ಸಲ್ಲಿಕೆಯ 90 ದಿನಗಳ ಅವಧಿ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಮತ್ತೆ 90 ದಿನಗಳಿಗೆ ವಿಸ್ತರಿಸಿಕೊಳ್ಳಲು ಯುಎಪಿಎ ಕಾಯ್ದೆಯಲ್ಲಿ ಅವಕಾಶವಿದೆ. ಅದರಂತೆ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿರುವುದು ಸರಿಯಾಗಿದೆ. ಅಲ್ಲದೇ ಈ ಹಂತದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಬೇಕಿದ್ದರೆ ಆರೋಪಿಗಳು ಜಾಮೀನು ಅರ್ಜಿ ಹಾಕಿಕೊಳ್ಳಬಹುದು. ಆದ್ದರಿಂದ ಮೇಲ್ಮನವಿಗೆ ವಿಚಾರಣಾ ಮಾನ್ಯತೆ ಇಲ್ಲ ಎಂದು ವಾದಿಸಿದರು.