ಬೆಂಗಳೂರು: ರಾಜ್ಯದಲ್ಲಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಶೌಚಗುಂಡಿ ಸ್ವಚ್ಛಗೊಳಿಸುವ ಅನಾಗರಿಕ ಪದ್ಧತಿಯನ್ನು ತಡೆಯಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.
ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು) ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿದ್ದ ಪ್ರತ್ಯೇಕ ಪಿಐಎಲ್ಗಳ ಸಂಬಂಧ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿತು.
ಎಐಸಿಸಿಟಿಯು ಪರ ವಾದ ಮಂಡಿಸಿದ ವಕೀಲ ಕ್ಲಿಫ್ಟನ್ ರೊಜಾರಿಯೋ, ರಾಜ್ಯದಲ್ಲಿ ಈಗಲೂ ಮಲ ಹೊರುವ ಪದ್ಧತಿ ಜಾರಿಯಲ್ಲಿದೆ. ಶೌಚಗುಂಡಿ ಸ್ವಚ್ಛತೆ ಕಾರ್ಯದಲ್ಲಿ ತೊಡಗುವ ಹೆಚ್ಚಿನ ಮಂದಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಶೌಚಗುಂಡಿ ಸ್ವಚ್ಛತೆ ವೇಳೆ ಉಂಟಾಗುವ ಪ್ರಾಣಹಾನಿಗೆ ಸಂಬಂಧಿಸಿದಂತೆ ಈವರೆಗೆ ಒಂದೇ ಒಂದು ಪ್ರಕರಣದಲ್ಲೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ ಎಂದು ಪೀಠದ ಗಮನಕ್ಕೆ ತಂದರು.
ಕೆಎಸ್‌ಎಲ್‌ಎಸ್‌ಎ ಪರ ವಾದ ಮಂಡಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ, ರಾಜ್ಯದಲ್ಲಿ 'ಶೌಚಗುಂಡಿ ಸ್ವಚ್ಛಗೊಳಿಸುವ ಉದ್ಯೋಗ ನಿಷೇಧ ಮತ್ತು ಪುನವರ್ಸತಿ ಕಾಯ್ದೆ’ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ವಿವರಿಸಿದರು.
ಅರ್ಜಿದಾರರ ಮನವಿ:
ಮನುಷ್ಯರಿಂದ ಶೌಚಗುಂಡಿ, ಒಳಚರಂಡಿ ಸ್ವಚ್ಛಗೊಳಿಸುವ ಹಾಗೂ ಮಲ ಹೊರುವಂತಹ ಅನಾಗರಿಕ ಪದ್ಧತಿಯನ್ನು ಈಗಾಗಲೇ ದೇಶದಲ್ಲಿ ನಿಷೇಧಿಸಲಾಗಿದೆ. ‘ಶೌಚಗುಂಡಿ ಸ್ವಚ್ಛಗೊಳಿಸುವ ಉದ್ಯೋಗ ನಿಷೇಧ ಮತ್ತು ಪುನವರ್ಸತಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಹಲವು ಆದೇಶಗಳನ್ನು ನೀಡಿವೆ. ಹೀಗಿದ್ದರೂ ರಾಜ್ಯದಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ಗುಂಡಿ ಸ್ವಚ್ಛಗೊಳಿಸುವ ಅನೇಕ ಕಾರ್ಮಿಕರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಅನೇಕ ಕಾರ್ಮಿಕರು ಉಸಿರುಗಟ್ಟಿ, ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಇಂತಹ ಪದ್ಧತಿಯನ್ನು ತಡೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನಿರ್ದೇಶಿಸಬೇಕು. ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳ ಪಾಲನೆಗೆ ಕಾಲಮಿತಿಯೊಳಗೆ ಯೋಜನೆ ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಸ್ವಚ್ಛತಾ ಕಾರ್ಯಗಳಿಗೆ ಮನುಷ್ಯರ ಬದಲಿಗೆ ಯಂತ್ರೋಪಕರಣಗಳನ್ನು ಬಳಸಲು ಆದೇಶಿಸಬೇಕು ಎಂದು ಆರ್ಜಿದಾರರು ಕೋರಿದ್ದಾರೆ.