ಬೆಂಗಳೂರು: ನಗರದ ವಿವಿಧ 8 ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇದೇ ಮಾರ್ಚ್ 28 ರಿಂದ ನಡೆಯಲಿರುವ ಪರೀಕ್ಷೆಗಳನ್ನು ಬರೆಯಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ.
ಮಾನ್ಯತೆ ನವೀಕರಿಸಿಲ್ಲ ಎಂಬ ಕಾರಣ ನೀಡಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಎಸ್‌ಎಸ್‌ಎಲ್‌ಸಿ ಬೋರ್ಡ್‌ನ ಕ್ರಮ ಪ್ರಶ್ನಿಸಿ ವಿವೇಕನಗರದ ಶಾಂತಿ ನಿಕೇತನ ಪ್ರೌಢಶಾಲೆ ಹಾಗೂ ಈಜಿಪುರದ ಮಾಡರ್ನ್ ಎಜುಕೇಷನ್ ಸೊಸೈಟಿ ಸೇರಿದಂತೆ ಎಂಟು ಶಾಲೆಗಳು ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಪಿ ಭಟ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿ, ಅರ್ಜಿದಾರ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ ಅಡಿ ನೋಂದಣಿ ಮಾಡಿಕೊಂಡಿದ್ದು, ಸರ್ಕಾರದಿಂದ ಶಾಶ್ವತ ಮಾನ್ಯತೆ ಪಡೆದಿವೆ. ಇದೀಗ ಮಾನ್ಯತೆ ನವೀಕರಿಸಿಕೊಳ್ಳಲು ಹೇಳುತ್ತಿರುವ ಶಿಕ್ಷಣ ಇಲಾಖೆ ಮಾನ್ಯತೆ ನವೀಕರಿಸಿಕೊಳ್ಳದಿದ್ದರೆ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವುದಿಲ್ಲ ಎನ್ನುತ್ತಿದೆ ಎಂದು ತಿಳಿಸಿದರು.
ಅಲ್ಲದೆ, ವಿದ್ಯಾರ್ಥಿಗಳು ಎಸ್‌ಎಲ್‌ಎಲ್‌ಸಿ ಪರೀಕ್ಷಾ ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಪ್ರವೇಶ ಪತ್ರ ತಡೆ ಹಿಡಿಯಲಾಗಿದೆ ಎಂದು ಇಲಾಖೆ ವೆಬ್ ಸೈಟ್ನಲ್ಲಿ ತೋರಿಸುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಪರೀಕ್ಷೆಗೆ ಅನುಮತಿ ನೀಡದಿದ್ದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅರ್ಜಿದಾರ ಶಾಲಾ ವಿದ್ಯಾರ್ಥಿಗಳಿಗೆ ಎಸ್‌ಎಲ್‌ಎಲ್‌ಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಆದೇಶಿಸುವಂತೆ ಕೋರಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಕಂದಕಕ್ಕೆ ಉರುಳಿದ ಖಾಸಗಿ ಬಸ್, ಐವರು ಪ್ರಯಾಣಿಕರು ಗಂಭೀರ