ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಶಿಫಾರಸಿನಂತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ 'ಕೊಡಗರು' ಎಂಬ ಪದವನ್ನು ತೆಗೆದುಹಾಕಿ 'ಕೊಡವ ಅಥವಾ ಕೊಡವರು' ಎಂದು ಸೇರಿಸಿ ಮೂರು ತಿಂಗಳಲ್ಲಿ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ನಿರಾಕರಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ. ಒಂದೊಮ್ಮೆ ಆದೇಶ ಪಾಲಿಸದಿದ್ದರೆ ಭಾರಿ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಹೈಕೋರ್ಟ್ನ ಆದೇಶದಿಂದಾಗಿ ಕೊಡಗ ತಪ್ಪು ಪದ ಬಳಕೆಯಿಂದ ಕೊಡವ ಸಮುದಾಯದವರಿಗೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಸಿಗಬಹುದಾಗಿದ್ದ ಸೌಲಭ್ಯಗಳಿಗೆ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಮನ್ನಣೆ ಸಿಕ್ಕಂತಾಗಿದೆ. 2002ರ ಫೆ.30ರಂದು ರಾಜ್ಯ ಸರ್ಕಾರವು ಕೊಡವರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿತ್ತು.
ಆದರೆ, ಪ್ರವರ್ಗ 3(ಎ) ಕ್ರಮ ಸಂಖ್ಯೆ-2ರಲ್ಲಿ 'ಕೊಡಗರು' ಎಂಬ ಪದ ಉಲ್ಲೇಖಿಸಿತ್ತು. ಇದರಿಂದಾಗಿ 2005ರಲ್ಲಿ ಸಿದ್ದಗಂಗಯ್ಯ ಅವರ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿ, ಪ್ರವರ್ಗ-3(ಎ) ಕ್ರಮ ಸಂಖ್ಯೆ-2ರಲ್ಲಿ ನಮೂದಿಸಿರುವ 'ಕೊಡಗರು' ಪದವನ್ನು ತೆಗೆದುಹಾಕುವಂತೆ ಹಾಗೂ ಅದರ ಬದಲಿಗೆ 'ಕೊಡವ ಅಥವಾ ಕೊಡವರು' ಎಂದು ಸೇರಿಸುವಂತೆ ಶಿಫಾರಸು ಮಾಡಿತ್ತು.
ಆದರೆ, 2015ರ ಅ.14ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ, ಸಕ್ಷಮ ಪ್ರಾಧಿಕಾರದಲ್ಲಿ ಅನುಮೋದನೆ ಸಿಗದ ಕಾರಣ ಆಯೋಗದ ಸಲಹೆ ಹಾಗೂ ಶಿಫಾರಸು ತಿರಸ್ಕರಿಸಲಾಗಿದೆ ಎಂದು ತಿಳಿಸಿತ್ತು. ಈ ಆದೇಶ ಪ್ರಶ್ನಿಸಿ 2015ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
(ಇದನ್ನೂ ಓದಿ: ಅವರು ಬಟ್ಟೆ ಬಿಚ್ಚಿದ್ದನ್ನು ನಾವೆಲ್ಲರೂ ನೋಡಿದ್ದೇವೆ: ಬೆಳಗಾವಿಗೆ ಬರುತ್ತಿದ್ದಂತೆ ಡಿಕೆಶಿ ಟಾಂಗ್)