ಬೆಂಗಳೂರು: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದ 16 ಜಿಲ್ಲೆಗಳಲ್ಲಿ ನ್ಯಾಯಾಲಯಗಳ ಕಲಾಪನ್ನು ಸೀಮಿತಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಈ ಮೊದಲು ಒಂದು ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳಿದ್ದ 9 ಜಿಲ್ಲೆಗಳ ನ್ಯಾಯಾಲಯಗಳಿಗೆ ಸೀಮಿತ ಕಲಾಪ ನಿಯಮಗಳನ್ನು ಅನ್ವಯಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳಿರುವ 16 ಜಿಲ್ಲೆಗಳಿಗೆ ಈ ನಿಯಮಗಳನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಈ 16 ಜಿಲ್ಲೆಗಳಲ್ಲಿ ನ್ಯಾಯಾಲಯಗಳು ಮೇ 22ರವರೆಗೆ ಸೀಮಿತ ಅವಧಿಗೆ ಕಾರ್ಯನಿರ್ವಹಿಸಲಿವೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರವೇ ಕೋರ್ಟ್ ಕಲಾಪಗಳು ನಡೆಯಲಿದ್ದು, ಯಾವುದೇ ಸಾಕ್ಷ್ಯಗಳ ವಿಚಾರಣೆ ನಡೆಸುವಂತಿಲ್ಲ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳಿರುವ ಪ್ರಕರಣಗಳಲ್ಲಿ ಮಾತ್ರ ಸಾಕ್ಷಿ ವಿಚಾರಣೆ ನಡೆಸಬೇಕು. ಕೋರ್ಟ್ಗಳಿಗೆ ಕಕ್ಷಿದಾರರು ಬರುವಂತಿಲ್ಲ ಎಂದು ಆದೇಶಿಸಿದೆ. ಅಲ್ಲದೆ ಯಾವುದೇ ರೀತಿಯಲ್ಲೂ ವ್ಯತಿರಿಕ್ತ ಆದೇಶಗಳನ್ನು ನೀಡಬಾರದು ಎಂದು ಆದೇಶಿಸಲಾಗಿದೆ. ಎಲ್ಲಾ ನ್ಯಾಯಾಂಗ ಸಿಬ್ಬಂದಿ ಏಪ್ರಿಲ್ ಅಂತ್ಯದೊಳಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸೀಮಿತ ಕಲಾಪ ನಡೆಸಲಿರುವ ಕೋರ್ಟ್ಗಳು
1) ಬೆಂಗಳೂರು ನಗರ
2) ಬೆಂಗಳೂರು ಗ್ರಾಮಾಂತರ
3) ಬಳ್ಳಾರಿ
4) ಬೀದರ್
5) ದಕ್ಷಿಣ ಕನ್ನಡ
6) ಹಾಸನ
7) ಕಲಬುರಗಿ
8) ಮೈಸೂರು
9) ತುಮಕೂರು
10) ಬೆಳಗಾವಿ
11) ಚಿಕ್ಕಬಳ್ಳಾಪುರ
12) ಧಾರವಾಡ
13) ಮಂಡ್ಯ
14) ರಾಯಚೂರು
15) ಶಿವಮೊಗ್ಗ
16) ವಿಜಯಪುರ