ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಆನ್‌ಲೈನ್ ಗೇಮಿಂಗ್ ಸಂಸ್ಥೆ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ನ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲು ಜಿಎಸ್‌ಟಿ ಗುಪ್ತಚರ ಪಡೆಯ ಮಹಾನಿರ್ದೇಶಕರು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಜಿಎಸ್‌ಟಿ ಗುಪ್ತಚರ ಪಡೆಯ ಆದೇಶ ಪ್ರಶ್ನಿಸಿ ಗೇಮ್ಸ್‌ಕ್ರಾಫ್ಟ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ಈ ಆದೇಶ ಹೊರಡಿಸಿದೆ. ಪೀಠ ತನ್ನ ಆದೇಶದಲ್ಲಿ, ಪ್ರಕರಣದ ತನಿಖೆಯು ಪ್ರಾಥಮಿಕ ಹಂತದಲ್ಲಿದೆ. ಸಂಸ್ಥೆ 130 ಕೋಟಿ ರೂ. ಮೊತ್ತದ ಸ್ಥಿರಾಸ್ತಿಯನ್ನು ಭದ್ರತೆಯನ್ನಾಗಿ ನೀಡಿದೆ. ಆದರೂ ಗೇಮ್ಸ್‌ಕ್ರಾಫ್ಟ್ ಸಲ್ಲಿಸಿರುವ ದಾಖಲೆ ಪರಿಗಣಿಸದೆ ಜಿಎಸ್‌ಟಿ ಗುಪ್ತಚರ ದಳ ಆದೇಶ ಹೊರಡಿಸಿರುವುದು ವಿವೇಚನಾರಹಿತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಜಿಎಸ್‌ಟಿ ಗುಪ್ತಚರ ಪಡೆಯ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಪೀಠ, ತಮ್ಮ ಖಾತೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಅರ್ಜಿದಾರ ಕಂಪನಿ ಮಾಡಿರುವ ಮನವಿಯು ನ್ಯಾಯಸಮ್ಮತವಾಗಿದೆ. ಆದ್ದರಿಂದ ಬಾಕಿ, ವೇತನ ಪಾವತಿ, ಗ್ರಾಹಕರು ಮತ್ತು ಪೂರೈಕೆದಾರರಿಗೆ ಹಣ ಪಾವತಿಸಲು ಗೇಮ್ಸ್‌ಕ್ರಾಫ್ಟ್‌ಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿ ಅರ್ಜಿ ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿದೆ.
ಗೇಮ್ಸ್‌ಕ್ರಾಫ್ಟ್ ಕಂಪನಿಯು 419 ಕೋಟಿ ಜಿಎಸ್‌ಟಿ ಶುಲ್ಕ ಪಾವತಿ ಮಾಡಲು ವಿಫಲವಾಗಿದೆ. ಹೀಗಾಗಿ, ಕಂಪನಿಯ ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆಯಲು ಜಿಎಸ್‌ಟಿ ಗುಪ್ತಚರ ದಳ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿದಾರ ಕಂಪನಿ, ತನ್ನ ಬ್ಯಾಂಕ್ ಖಾತೆಯ ಮೂಲಕವೇ ಉದ್ಯೋಗಿಗಳು ಮತ್ತು ಇತರರಿಗೆ ವೇತನ ಪಾವತಿಸಲು ಅವಕಾಶ ಮಾಡಿಕೊಡುವಂತೆ ಕೋರಿತ್ತು.