ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವ ವಿಚಾರಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಹೀರಾತು ಪ್ರದರ್ಶನಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯುವುದಾಗಿ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಜಾಗೃತಿ ಮೂಡಿಸಲು ಅಳವಡಿಸಿರುವ ಜಾಹೀರಾತು ಫಲಕ(ಹೋರ್ಡಿಂಗ್ಸ್)ಗಳಲ್ಲಿ ಷರತ್ತುಗಳನ್ನು ಉಲ್ಲಂಘಿಸಿ ಖಾಸಗಿ ಸಂಸ್ಥೆಗಳ ಜಾಹೀರಾತು ಪ್ರದರ್ಶಿಸಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿದೆ. ಕೋವಿಡ್ ಕುರಿತು ಜಾಗೃತಿ ಮೂಡಿಸಲು ಹೋರ್ಡಿಂಗ್ಸ್ಗಳನ್ನು ಅಳವಡಿಸುವ ಅಗತ್ಯವಿದೆ. ಜಾಹೀರಾತು ನಿರ್ಬಂಧಿಸಿರುವ ಆದೇಶವನ್ನು ಸಡಿಲಿಸುವಂತೆ ಕೋರಿ ಸರ್ಕಾರ ಈ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಜುಲೈ 15ರಂದು ಷರತ್ತುಗಳೊಂದಿಗೆ ಅನುಮತಿ ನೀಡಿತ್ತು. ಜಾಹೀರಾತು ಫಲಕಗಳಲ್ಲಿ ಹತ್ತಿ ಬಟ್ಟೆ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸಬಾರದು. ಸೋಂಕು ನಿಯಂತ್ರಣ ಕ್ರಮಗಳ ಬಗ್ಗೆಯಷ್ಟೇ ಜಾಹೀರಾತು ನೀಡಬೇಕು. ಯಾವುದೇ ಪ್ರಾಯೋಜಕರ, ಖಾಸಗಿ ಉತ್ಪನ್ನ ಸೇವೆಗಳ ಕುರಿತ ವಿವರಗಳನ್ನು ಪ್ರದರ್ಶಿಸಬಾರದು ಎಂಬ ಷರತ್ತುಗಳನ್ನು ವಿಧಿಸಿತ್ತು.
ಆದರೆ, ಕೋವಿಡ್ ಜಾಗೃತಿ ಜಾಹೀರಾತು ಫಲಕಗಳಲ್ಲಿ ಖಾಸಗಿ ಸಂಸ್ಥೆಗಳ ಉತ್ಪನ್ನಗಳ ಕುರಿತ ಜಾಹೀರಾತನ್ನೂ ಪ್ರದರ್ಶಿಸಲಾಗಿದೆ. ಇದು ಹೈಕೋರ್ಟ್ ವಿಧಿಸಿರುವ ಷರತ್ತುಗಳ ಉಲ್ಲಂಘನೆ ಎಂದು ಆಕ್ಷೇಪಿಸಿ, ಮೂಲ ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಹೈಕೋರ್ಟ್‌ಗೆ ಫೋಟೋ ಸಹಿತ ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದರು. ಇದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ಕೇವಲ ಕೋವಿಡ್ ಜಾಗೃತಿ ಕುರಿತಂತೆ ಮಾತ್ರವೇ ಜಾಹೀರಾತು ಪ್ರದರ್ಶಿಸಬೇಕೆಂದು ಸ್ಪಷ್ಟವಾಗಿ ನಿರ್ದೇಶಿಸಲಾಗಿದೆ. ಹಾಗಿದ್ದರೂ ಖಾಸಗಿ ಸಂಸ್ಥೆಗಳ, ಉತ್ಪನ್ನಗಳ ವಿವರಗಳನ್ನು ಪ್ರದರ್ಶಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಇದಕ್ಕೆ ಸಮಜಾಯಿಷಿ ನೀಡಲು ಯತ್ನಿಸಿದ ಸರ್ಕಾರದ ಪರ ವಕೀಲರು, ಕೆಲವೆಡೆ ಖಾಸಗಿ ಸಂಸ್ಥೆಗಳೇ ಸ್ವಯಂಪ್ರೇರಿತವಾಗಿ ಕೋವಿಡ್ ಜಾಗೃತಿ ಮೂಡಿಸಲು ಮುಂದಾಗಿವೆ ಎಂದರು. ಹೇಳಿಕೆ ಒಪ್ಪದ ಪೀಠ, ಇಂಥ ಜಾಹೀರಾತು ನೀಡುವ ಬಗ್ಗೆ ಕೋರ್ಟ್ ಆದೇಶದಲ್ಲೆಲ್ಲೂ ಹೇಳಿಲ್ಲ. ತಕ್ಷಣ ಖಾಸಗಿ ಸಂಸ್ಥೆಗಳ ಜಾಹೀರಾತುಗಳನ್ನು ಸರ್ಕಾರ ತೆರವುಗೊಳಿಸಿ, ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲವಾದ್ರೆ ಜಾಹೀರಾತು ಅಳವಡಿಕೆಗೆ ಅನುಮತಿ ನೀಡಿರುವ ಆದೇಶವನ್ನೇ ಹಿಂಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿತು.