ಬೆಂಗಳೂರು: ಖಾಸಗಿ ಟಿವಿ ಚಾನಲ್‌ಗಳ ಕಾರ್ಯಕ್ರಮ ನಿಯಂತ್ರಣಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲು ಹೈಕೋರ್ಟ್ ಎರಡು ತಿಂಗಳ ಗಡುವು ನೀಡಿದೆ.
2008ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶಾನುಸಾರ, 2 ತಿಂಗಳ ಒಳಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚರಣಾ ಸಮಿತಿ ರಚಿಸಬೇಕು. ಆಕ್ಷೇಪಾರ್ಹ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ದೂರು ದಾಖಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತ್ವತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡನೆ ಮಾಡಿ, ಖಾಸಗಿ ಟಿ.ವಿ ಚಾನಲ್ ಕಾರ್ಯಕ್ರಮಗಳ ನಿಯಂತ್ರಣಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಬೇಕೆಂದು 2008ರ ಫೆ.19ರಂದು ಕೇಂದ್ರ ಸರ್ಕಾರವು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ರೆಗ್ಯೂಲೇಷನ್ಸ್ ಕಾಯ್ದೆ 1995 ರ ಅಡಿ ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸಿದೆ. ಆದರೆ, ರಾಜ್ಯ ಸರ್ಕಾರ ಇಲ್ಲಿಯವರೆಗೆ ಮೇಲ್ವಿಚಾರಣಾ ಸಮಿತಿ ರಚಿಸಿಲ್ಲ. ನೆಟ್‌ವರ್ಕ್ಸ್ ರೆಗ್ಯೂಲೇಷನ್ಸ್ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಅರ್ಜಿದಾರರು 2018 ರ ನ.19ರಂದು ಅಂದಿನ ರಾಜ್ಯದ ಮುಖ್ಯಮಂತ್ರಿ ಹಾಗೂ ಸರ್ಕಾರದ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿವರಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಲಯ, ಸಮಿತಿ ರಚನೆಯ ಜೊತೆಗೆ ಆಕ್ಷೇಪಾರ್ಹ ಕಾರ್ಯಕ್ರಮಗಳ ಬಗ್ಗೆ ದೂರು ದಾಖಲಿಸುವ ಸಮಿತಿಯ ವಿವರವನ್ನು ನವೆಂಬರ್ 22 ರೊಳಗೆ ವರದಿಯ ಮೂಲಕ ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದೆ.