ಬೆಂಗಳೂರು: ಗೂಗಲ್‌ನ ಗೌಪ್ಯತಾ ವಲಯದೊಳಗೆ ಪ್ರತಿವಾದಿಗಳಾದ ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ ಅನ್ನು (ಎಡಿಐಎಫ್) ಸೇರಿಸಿಕೊಂಡು ಅವರ ಜೊತೆ ಗೌಪ್ಯ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಭಾರತೀಯ ಸ್ಪರ್ಧಾ ಆಯೋಗದ ಆದೇಶ ಪ್ರಶ್ನಿಸಿ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ಸುನಿಲ್ ದತ್ ಯಾದವ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
2022ರ ಏಪ್ರಿಲ್ 18ರಂದು ಎಡಿಐಎಫ್‌ಗೆ ಗೌಪ್ಯ ಮಾಹಿತಿ ನೀಡಲು ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ. ಸಿಸಿಐ ಮುಂದಿರುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗೂಗಲ್ ಸಂಸ್ಥೆಯು ಟೈಮ್‌ಲೈನ್ ಪಾಲಿಸಬೇಕು ಎನ್ನಲಾಗಿದೆ. ಇದಕ್ಕೆ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಅರ್ಜಿದಾರ ಸಂಸ್ಥೆ ಗೂಗಲ್ ಹೇಳಿದೆ. ಆದೇಶ ಮಾಡುವಾಗ ಸಿಸಿಐ ನಿಯಮಗಳನ್ನು ಪಾಲಿಸಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಸಿಸಿಐ ಆದೇಶಕ್ಕೆ ಮುಂದಿನ ವಿಚಾರಣೆವರೆಗೂ ತಡೆಯಾಜ್ಞೆ ನೀಡಿ ಆದೇಶಿದೆ. ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ: ಜಾನುವಾರು ಸಾಗಣೆ ನಿರ್ಬಂಧಿಸುವ ಸೆಕ್ಷನ್ 5ರ ಜಾರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್