ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ನಾಳೆ ನಡೆಯಲಿರುವ ಚುನಾವಣೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸ್ಥಾಯಿ ಸಮಿತಿಗಳ ಚುನಾವಣೆಗೆ ತಡೆ ನೀಡಬೇಕು ಅಥವಾ ಚುನಾವಣೆ ಮುಂದೂಡಲು ಚುನಾವಣಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಹಾಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಇಮ್ರಾನ್ ಪಾಷಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠ, ಚುನಾವಣೆಗೆ ತಡೆ ನೀಡಲು ನಿರಾಕರಿಸಿತು. ಅಲ್ಲದೆ, ಅರ್ಜಿ ಸಂಬಂಧ ಬಿಬಿಎಂಪಿ, ಪ್ರಾದೇಶಿಕ ಆಯುಕ್ತರು ಹಾಗೂ ಪ್ರತಿವಾದಿಗಳಾಗಿರುವ 18 ಪಾಲಿಕೆ ಸದಸ್ಯರಿಗೆ ಇದೇ ವೇಳೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ 18 ಪಾಲಿಕೆ ಸದಸ್ಯರ ಅನರ್ಹತೆ ಬಾಕಿ ಇದೆ. ಈ ವಿಚಾರ ಇತ್ಯರ್ಥವಾಗುವ ವರೆಗೆ ಸ್ಥಾಯಿ ಸಮಿತಿಗಳ ಚುನಾವಣೆಗೆ ತಡೆ ನೀಡಬೇಕು. ಇಲ್ಲವೇ ಚುನಾವಣೆ ಮುಂದೂಡಬೇಕು ಎಂದು ಕೋರಿದರು. ಮನವಿ ಪುರಸ್ಕರಿಸದ ಪೀಠ, ಈಗಾಗಲೇ ಚುನಾವಣಾ ವೇಳಾ ಪಟ್ಟಿ ಪ್ರಕಟಗೊಂಡಿದೆ. ಈ ಹಂತದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶ ಮಾಡಲಾಗದು. ಅನರ್ಹತೆ ದೂರು ಬಾಕಿ ಇರುವ ಹಿನ್ನೆಲೆಯಲ್ಲಿ ಆ ಸದಸ್ಯರು ಗೌಪ್ಯ ಮತದಾನ ಮಾಡಲು ಬಯಸಿದರೆ ಅದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಅವರ ಮತಗಳನ್ನು ಮತ್ತೆ ಮತ ಪೆಟ್ಟಿಗೆಗೆ ಹಾಕಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶಿಸಿದೆ.