ಬೆಂಗಳೂರು : ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಯಲ್ಲಿ ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ಫೋಟೋ ಪ್ರಕಟಿಸಿದ ಪ್ರಕರಣದಲ್ಲಿ ಪತ್ರಕರ್ತ ಜಿ. ಮಹಾಂತೇಶ್ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪತ್ರಕರ್ತ ಮಹಾಂತೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಶೋಕ ಜಿ.ನಿಜಗಣ್ಣವರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಿ.ಎಚ್ ಹನುಮಂತರಾಯ ಅವರು, ಸುದ್ದಿ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಕೇವಲ ಸುದ್ದಿ ಮಾತ್ರ ಪ್ರಕಟಿಸಿದೆ. ಸ್ವಾಮೀಜಿ ಅವರ ಪೂರ್ವಾಶ್ರಮದ ಖಾಸಾ ತಮ್ಮ ದೊರೆಸ್ವಾಮಿ ವಿರುದ್ಧ ಬೆಂಗಳೂರಿನ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಉಪನ್ಯಾಸಕಿಯೊಬ್ಬರು ಅತ್ಯಾಚಾರ ಆರೋಪದಡಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಅಯ್ಯೋ.. ಕೊರೊನಾ ನೀನೆಷ್ಟು ಕ್ರೂರಿ..: ಅನಾರೋಗ್ಯದಿಂದ ಸತ್ತ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಜನರು!
ಈ ಪ್ರಕರಣದಲ್ಲಿ ಆರೋಪಿಗೆ ಬೆಂಗಳೂರು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದು, ಅದನ್ನಷ್ಟೇ ಪ್ರಕಟಿಸಲಾಗಿದೆ. ನ್ಯಾಯಾಲಯದ ಆದೇಶವನ್ನು ಯಥಾವತ್ತಾಗಿ ಪ್ರಕಟಿಸುವುದು ಅಪರಾಧವಲ್ಲ. ಆದರೆ, ಪೊಲೀಸರು ಸತ್ಯ ಸಂಗತಿ ವರದಿ ಮಾಡಿರುವುದನ್ನೇ ಅಪರಾಧ ಎಂದು ಗ್ರಹಿಸಿ ಎಫ್ಐಆರ್ ದಾಖಲಿಸಿದ್ದಾರೆ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು. ವಾದ ಪರಿಗಣಿಸಿರುವ ಪೀಠ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಸ್ವಾಮೀಜಿ ಪೂರ್ವಾಶ್ರಮ ಸೋದರ ಆಗಿರುವ ದೊರೆಸ್ವಾಮಿ ವಿರುದ್ಧ ಉಪನ್ಯಾಸಕಿಯೊಬ್ಬರು ಅತ್ಯಾಚಾರ ಆರೋಪದಡಿ ಎಫ್ಐರ್ ದಾಖಲಿಸಿರುವ ಬಗ್ಗೆ ಹಾಗೂ ಸೆಷನ್ಸ್ ಕೋರ್ಟ್ ಆರೋಪಿಗೆ ಜಾಮೀನು ನಿರಾಕರಿಸಿರುವ ಬಗ್ಗೆ ಪತ್ರಕರ್ತ ಜಿ ಮಹಾಂತೇಶ್ ತಮ್ಮ ವೆಬ್ ಪೋರ್ಟಲ್‌ನಲ್ಲಿ ವರದಿ ಪ್ರಕಟಿಸಿದ್ದರು. ಈ ಸುದ್ದಿಯಲ್ಲಿ ಮುರುಘಾಶರಣರ ಫೋಟೋ ಬಳಸಿಕೊಳ್ಳಲಾಗಿತ್ತು. ಸ್ವಾಮೀಜಿ ಫೋಟೋ ಬಳಕೆ ಮಾಡುವ ಮೂಲಕ ಅವರ ಗೌರವಕ್ಕೆ ಕುಂದುಂಟು ಮಾಡಲಾಗಿದೆ ಎಂದು ಆರೋಪಿಸಿ ಮಠದ ಶಿಕ್ಷಣೆ ಸಂಸ್ಥೆಯ ನೌಕರರೊಬ್ಬರು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಚಿತ್ರದುರ್ಗ ಸೆಷನ್ಸ್ ನ್ಯಾಯಾಲಯ ಸದ್ಯ ಮಹಾಂತೇಶ್ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.