ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ನಟಿಸಿರುವ 'ಗುಡ್ ನ್ಯೂಸ್' ಹಿಂದಿ ಚಲನಚಿತ್ರದ ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸಮೀಮ್ ರಝಾ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಿನ್ನೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. ಗುಡ್ ನ್ಯೂಸ್ ಸಿನಿಮಾ ನೋಡಿದ ತಕ್ಷಣ ದಂಪತಿ ಕೃತಕ ಗರ್ಭಧಾರಣೆ ಚಿಕಿತ್ಸೆಗಾಗಿ ಇಂದಿರಾ ಆಸ್ಪತ್ರೆಗೆ ಹೋಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ದಂಪತಿಗಳು ತಮಗೆ ಇಷ್ಟವಾದ ಆಸ್ಪತ್ರೆಗೆ ಹೋಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿತು.
ಗುಡ್ ನ್ಯೂಸ್ ಚಿತ್ರದ ಕಥಾವಸ್ತು ಕೃತಕ ಗರ್ಭಧಾರಣೆ ಚಿಕಿತ್ಸೆ ಕುರಿತಾಗಿದೆ. ಚಿತ್ರದ ಸಂಭಾಷಣೆಯೊಂದರಲ್ಲಿ ಇಂದಿರಾ ಐವಿಎಫ್ ಸಂಸ್ಥೆ ಹೊರತುಪಡಿಸಿ ಉಳಿದ ಸಂಸ್ಥೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯುವುದಿಲ್ಲ ಎಂಬ ಅರ್ಥ ಬರುವ ಮಾತುಕತೆ ಇದೆ ಎಂಬ ಆರೋಪವನ್ನು ಸಾಮಾಜಿಕ ಕಾರ್ಯಕರ್ತ ಸಮೀಮ್ ರಝಾ ಮಾಡಿದ್ದರು.