ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ 2011ರಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆಸಿದ್ದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಂತಿಮ ಪಟ್ಟಿಯಲ್ಲಿದ್ದ 362 ಅಭ್ಯರ್ಥಿಗಳ ನೇಮಕಾತಿಯನ್ನು ಊರ್ಜಿತಗೊಳಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯ್ದೆ- 2022ರ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ವಾದ ಮಂಡಿಸಿ, ಕೆಪಿಎಸ್‌ಸಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕ್ರಮ ನಡೆಸಿರುವುದು ಸಿಐಡಿ ವರದಿಯಿಂದ ಬಹಿರಂಗವಾಗಿದೆ. ಕೆಪಿಎಸ್‌ಸಿ ನೇಮಕಾತಿ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದ್ದು, ಈ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಆದರೂ ರಾಜ್ಯ ಸರ್ಕಾರ ಕಾನೂನುಬಾಹಿರವಾಗಿ ಆಯ್ಕೆಯಾಗಿರುವವರನ್ನು ಉಳಿಸಿಕೊಳ್ಳಲು ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯ್ದೆ-2022 ಜಾರಿಗೆ ತಂದಿರುವುದು ಅಂಸಾಂವಿಧಾನಿಕ ಮತ್ತು ಅಕ್ರಮ ಎಂದರು.
ಮನವಿ ತಿರಸ್ಕೃತ: ವಾದ ಪರಿಗಣಿಸದ ಪೀಠ, ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ಮಾಡಿರಬಹುದು. ಹಾಗೆಂದು ಕಾಯ್ದೆಯೂ ಸರಿಯಿಲ್ಲವೆಂದು ಹೇಗೆ ಹೇಳುತ್ತೀರಿ? ಕಾಯ್ದೆ ರೂಪಿಸಲು ಕಾರಣಗಳು ಏನಾದರೂ ಇರಬಹುದು. ನೀವು ಕಾಯ್ದೆಯಲ್ಲಿನ ಯಾವುದೇ ನಿರ್ದಿಷ್ಟ ನಿಯಮವನ್ನು ಪ್ರಶ್ನಿಸಿಲ್ಲ. ಬದಲಿಗೆ ಇಡೀ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದೀರಿ. ಕಾಯ್ದೆಯ ನಿಯಮಗಳು ಹೇಗೆ ಅಸಾಂವಿಧಾನಿಕವಾಗಿವೆ ಎಂಬುದುನ್ನು ನೀವು ಹೇಳಿಲ್ಲ. ಇನ್ನು ನೇಮಕಾತಿ ಆದೇಶ ನೀಡುವುದನ್ನು ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಈಗಾಗಲೇ ಕೆಎಸ್‌ಎಟಿಯಲ್ಲಿ ಅರ್ಜಿ ಸಲ್ಲಿಸಿದ್ದು, ಬಾಕಿಯಿದೆ. ಈ ಹಂತದಲ್ಲಿ ಅರ್ಜಿದಾರರ ಮನವಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರ 2011ರಲ್ಲಿ ಕೆಪಿಎಸ್‌ಸಿ ಮೂಲಕ ಆಯ್ಕೆಯಾದ 362 ಅಭ್ಯರ್ಥಿಗಳ ನೇಮಕ ಸಕ್ರಮಗೊಳಿಸಲು ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ ರೂಪಿಸಿ, ಜಾರಿಗೆ ತಂದಿದೆ. ಈ ಕಾಯ್ದೆಯನ್ನು ಸಂವಿಧಾನ ಬಾಹಿರ ಎಂದು ಘೋಷಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೆಪಿಎಸ್‌ಸಿ ನೇಮಕಾತಿಯಲ್ಲಿ ಆಯ್ಕೆಯಾದ 362 ಅಭ್ಯರ್ಥಿಗಳ ಆಯ್ಕೆ ಅಕ್ರಮದ ಕುರಿತು ಸಿಐಡಿ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಅದನ್ನು ಆಧರಿಸಿ ಹೈಕೋರ್ಟ್ ಇಡೀ ನೇಮಕಾತಿಯನ್ನು ರದ್ದುಗೊಳಿಸಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದೆ. ಹಾಗಿದ್ದೂ, ಅಕ್ರಮ ನೇಮಕಾತಿಯಯನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ರೂಪಿಸಿರುವ ಕಾಯ್ದೆ ಅಸಂವಿಧಾನಿಕ ಹಾಗೂ ಅಕ್ರಮ ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.