ಬೆಂಗಳೂರು : ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡ ಕಡ್ಡಾಯ ಮಾಡಿರುವ ಆದೇಶಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವುಗೊಳಿಸಿ ಅಂತಿಮ ತೀರ್ಪಿನಲ್ಲಿ ಕನ್ನಡ ಕಡ್ಡಾಯ ತೀರ್ಪನ್ನ ಪಡೆಯುತ್ತೇವೆ. ಹೊರಗಿನಿಂದ ಬಂದವರು ಕನ್ನಡ ಕಲಿತು, ಇಲ್ಲಿ ಸುಲಲಿತವಾಗಿ ಮಾತನಾಡಲು ಅನುಕೂಲ ಆಗಲಿದೆ. ಹಾಗಾಗಿ, ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ಕನ್ನಡ ಕಡ್ಡಾಯ ನಿರ್ಧಾರವನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಸಮರ್ಥಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕನ್ನಡ ಕಡ್ಡಾಯ ಮಾಡಿದೆ, ಮೊದಲು ಕಡ್ಡಾಯ ಇರಲಿಲ್ಲ. ಕೋರ್ಟ್ ಸದ್ಯಕ್ಕೆ ಸ್ಟೇ ಕೊಟ್ಟಿದೆ. ಆದರೆ, ಸ್ಕ್ವಾಶ್ ಮಾಡಿಲ್ಲ. ನ್ಯಾಯಾಲಯದಲ್ಲಿ ಪ್ರಬಲವಾಗಿ ಸರ್ಕಾರದ ಪರ ವಾದ ಮಂಡಿಸಲಿದ್ದೇವೆ. ಕನ್ನಡ ಕಡ್ಡಾಯ ಯಾಕೆ ತಂದಿದ್ದೇವೆ ಅಂತಾ ಹೈಕೋರ್ಟ್ ಗಮನಕ್ಕೆ ತಂದಿದ್ದೇವೆ. ತಡೆಯಾಜ್ಞೆ ತೆರವುಗೊಳಿಸಿ ಅಂತಿಮ ತೀರ್ಪಿನಲ್ಲಿ ಕನ್ನಡ ಕಡ್ಡಾಯ ತೀರ್ಪನ್ನ ಪಡೆಯುತ್ತೇವೆ ಎಂದರು.
ಹಲಾಲ್, ಜಟ್ಕಾ ಎರಡಕ್ಕೂ ಅವಕಾಶವಿದೆ : ಯಾರ್ಯಾರಿಗೆ ಯಾವ ಸಂಸ್ಕೃತಿ ಇದೆ ಅದನ್ನು ಪಾಲಿಸುತ್ತಾರೆ. ನಮ್ಮ ಕಾನೂನಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಹಲಾಲ್ ಪದ್ಧತಿ ಯಾರು ಮಾಡಬೇಕೋ, ತಿನ್ನಬೇಕೋ ಅದಕ್ಕೆ ಅವಕಾಶ ಇದೆ. ಯಾರು ಜಟ್ಕಾ ಕಟ್ ಮಾಡಿದ್ದಾರೆ, ಅವರು ಅವರ ಪದ್ಧತಿ ಪಾಲಿಸುತ್ತಾರೆ. ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದರು.
ಕಾಂಗ್ರೆಸ್ ಸಂಸ್ಕೃತಿಯೇ ಕ್ರಿಮಿನಲ್ ಸಂಸ್ಕೃತಿ : ಬಿಜೆಪಿ ಹಾಗೂ ಗೃಹ ಸಚಿವರ ಬಗ್ಗೆ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿರೋ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥ್ ನಾರಾಯಣ್, ಈ ನಾಯಕರು ಯಾವ ರೀತಿ ಹೇಳಿಕೆ ನೀಡುತ್ತಾರೆ ಗೊತ್ತಿಲ್ಲ. ಆದರೆ, ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಯಾರೂ ಮಾಡಬಾರದು. ಕಾಂಗ್ರೆಸ್ ಸಂಸ್ಕೃತಿಯೇ ಕ್ರಿಮಿನಲ್ ಸಂಸ್ಕೃತಿ. ಇವರು ದೇಶದ ನಿಲುವನ್ನು ವಿರೋಧಿಸುತ್ತಾ ಬರುತ್ತಿದ್ದಾರೆ. ಸ್ಪಷ್ಟತೆ ಇಲ್ಲದಿರೋದೆ ಅವರ ಗೊಂದಲಕ್ಕೆ ಕಾರಣ. ಅದಕ್ಕೆ ಜನ ಇವರನ್ನ ತಿರಸ್ಕಾರ ಮಾಡಿದ್ದಾರೆ ಎಂದು ದೂರಿದರು.
ಜ್ಯೋತಿಬಾ ಫುಲೆ ಆಶಯ ಮುಂದುವರಿಕೆ ಅಗತ್ಯ : ಜ್ಯೋತಿಬಾಫುಲೆ ಜಯಂತಿಯಲ್ಲಿ ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆ ನೆನೆಯಬೇಕು. ಭಾರತದಲ್ಲಿ ಹಿಂದಿನ ಕಾಲದಲ್ಲಿ ಎಲ್ಲರೂ ಶಿಕ್ಷಣ ಪಡೆಯುವುದು ಕಷ್ಟವಿತ್ತು. ಆ ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಕೊಡುಗೆ ನೀಡಿದವರಲ್ಲಿ ಜ್ಯೋತಿ ಬಾಫುಲೆ ಕೂಡ ಒಬ್ಬರು. ದಲಿತರಿಗೆ, ಬಡವರಿಗೆ ಶಿಕ್ಷಣ ಕೊಡಿಸಲು ಜ್ಯೋತಿ ಬಾಫುಲೆ ದಂಪತಿ ಕೊಡುಗೆ ಅಪಾರ ಎಂದು ಅಶ್ವತ್ಥ್ ನಾರಾಯಣ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕತ್ತಿ-ಸವದಿ, ಜಾರಕಿಹೊಳಿ ಬ್ರದರ್ಸ್ ಸಂಘರ್ಷ : ಎಲ್ಲರ ಚಿತ್ತ ಬಿಎಸ್‌ವೈ-ಅರುಣ್ ಸಿಂಗ್ ಭೇಟಿಯತ್ತ!