ಬೆಂಗಳೂರು: ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯ ಪಿ.ಸಿ.ಮೋಹನ್ ವಿರುದ್ದ ಆಸ್ತಿ ವಿವರ ಮುಚ್ಚಿಟ್ಟ ಆರೋಪದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಸಂಸದ ಪಿ.ಸಿ.ಮೋಹನ್ ದೇವನಹಳ್ಳಿ ಬಳಿ ಬಹುಕೋಟಿ ಬೆಲೆ ಬಾಳುವ ಜಮೀನು ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ತನಿಖೆ ರದ್ದು ಕೋರಿ ಪಿ.ಸಿ.ಮೋಹನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ತನಿಖೆಗೆ ತಡೆ ನೀಡಿದೆ. ದೇವನಹಳ್ಳಿ ಬಳಿ 42 ಎಕರೆ ಜಮೀನು ಖರೀದಿಸಿದ್ದರೂ ಲೋಕಸಭಾ ಚುನಾವಣೆ ವೇಳೆ ಚುನಾವಣೆ ಆಯೋಗಕ್ಕೆ ಜಮೀನು ಖರೀದಿ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಆನಂದ್ ಎಂಬುವವರು ಕ್ರಿಮಿನಲ್ ಕೇಸ್ ದಾಖಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ಕೋರ್ಟ್ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಗೆ ತನಿಖೆ ನಡೆಸಲು ನಿರ್ದೇಶಿಸಿತ್ತು. ಈ ನಿರ್ದೇಶನವನ್ನು ಪ್ರಶ್ನಿಸಿ ಪಿ.ಸಿ.ಮೋಹನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಪೀಠವು ತನಿಖೆಗೆ ತಡೆ ನೀಡಿ ದಕ್ಷಿಣ ವಿಭಾಗದ ಡಿಸಿಪಿ, ಅರ್ಜಿದಾರ ಟಿ.ಆರ್.ಆನಂದ್‌ಗೆ ನೋಟಿಸ್ ಜಾರಿಗೊಳಿಸಿದೆ.