ಬೆಂಗಳೂರು: ನಗರದ ಕೆ.ಆರ್. ಪುರ ಬಳಿಯ ಬಸವನಪುರ ಕೆರೆ ಭೂಮಿ ಒತ್ತುವರಿ ಆರೋಪ ಹಿನ್ನೆಲೆಯಲ್ಲಿ ಕೆರೆಯ ವಿಸ್ತೀರ್ಣ ಹಾಗೂ ಬಫರ್ ವಲಯವನ್ನು ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಬಸವನಪುರ ಗ್ರಾಮದ ನಿವಾಸಿ ಎ. ವೇಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಬೆಂಗಳೂರು ನಗರ ಜಿಲ್ಲಾಧಿಕಾರಿಯು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರನ್ನು ನಿಯೋಜಿಸಿ, ಕೆರೆ ವಿಸ್ತೀರ್ಣ ಹಾಗೂ ಬಫರ್ ವಲಯದ ಸರ್ವೇ ನಡೆಸಬೇಕು. ಒಂದೊಮ್ಮೆ ಒತ್ತುವರಿ ಆಗಿರುವುದು ಕಂಡುಬಂದರೆ ಅದರ ತೆರವಿಗೆ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಸರ್ವೇ ನಡೆಸುವ ಸಂದರ್ಭದಲ್ಲಿ ಅರ್ಜಿದಾರರಿಗೆ ನೋಟಿಸ್ ನೀಡಿ ಅವರ ಗಮನಕ್ಕೆ ತರಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸಹ ಓರ್ವ ಅಧಿಕಾರಿಯನ್ನು ನೇಮಕ ಮಾಡಿ, ಕೆರೆಯ ಸುತ್ತಮುತ್ತ ಕಾಲುವೆ ಜಾಗ ಒತ್ತುವರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಫೆ.24 ಕ್ಕೆ ಮುಂದೂಡಿತು.
ಕೆ.ಆರ್. ಪುರ ಹೋಬಳಿಯ ಬಸವನಪುರ ಕೆರೆಯ ಜಾಗವನ್ನು ದಿ ಎಸ್‌ಇಎ ಗ್ರೂಪ್ ಆಫ್ ಕಾಲೇಜ್ ಎಜುಕೇಷನಲ್ ಇನ್ಸ್‌ಟಿಟ್ಯೂಟ್ ಒತ್ತುವರಿ ಮಾಡಿದೆ. ಬೆಂಗಳೂರು ನಗರ ಪೂರ್ವ ತಾಲೂಕು ತಹಶೀಲ್ದಾರ್, ಕೆರೆ ಪ್ರದೇಶವಾದ 14 ಎಕರೆ 7 ಗುಂಟೆಯನ್ನು ಸರ್ವೇ ನಡೆಸಿದ್ದಾರೆ. ನಂತರ ಒತ್ತುವರಿ ಮಾಡಲಾಗಿರುವ 29 ಗುಂಟೆ ಜಾಗವನ್ನು ತೆರವುಗೊಳಿಸುವಂತೆ 2011 ರ ನ.26 ರಂದು ಕಾಲೇಜಿಗೆ ನಿರ್ದೇಶಿಸಿದ್ದಾರೆ. ಆದರೆ ಈವರೆಗೂ ಕಾಲೇಜು ಒತ್ತುವರಿ ತೆರವುಗೊಳಿಸಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
ಬಸವನಪುರ ಕೆರೆ ಜಲಾಯನ ಪ್ರದೇಶದಲ್ಲಿ ಆಗಿರುವ ಒತ್ತುವರಿ ಮತ್ತು ಅಕ್ರಮ ಕಟ್ಟಡಗಳ ನಿರ್ಮಾಣವನ್ನು ತೆರೆವುಗೊಳಿಸಬೇಕು. ಕೆರೆಗೆ ಒಳ ಚರಂಡಿ ನೀರು ಬಿಡಲಾಗುತ್ತಿದೆ. ಕಟ್ಟಡ ತ್ಯಾಜ್ಯ ಮತ್ತು ಕಸವನ್ನು ಸುರಿಯಲಾಗುತ್ತಿದೆ. ಅದನ್ನು ತಡೆಯಲು ಬಿಬಿಎಂಪಿ ಹಾಗೂ ಕೆಎಸ್‌ಪಿಸಿಬಿಗೆ ನಿರ್ದೇಶಿಸಬೇಕು. ಮುಂದೆ ಕೆರೆ ಪ್ರದೇಶ ಒತ್ತುವರಿಯಾಗದಂತೆ ಸಂರಕ್ಷಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಕೆರೆ ಪ್ರದೇಶ ಒತ್ತುವರಿಯಾಗದಂತೆ ಮತ್ತು ಒಳಚರಂಡಿ ನೀರು ಸೇರಿದಂತೆ ಮೇಲ್ವಿಚಾರಣೆ ವಹಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ರಚಿಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.