ಬೆಂಗಳೂರು: ಒಂದೆಡೆ ಪಾದಾರಯನಪುರದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಕ್ವಾರಂಟೈನ್ನಲ್ಲಿರುವಾತ ಎಸ್ಕೇಪ್ ಆಗಿದ್ದು, ಪೊಲಿಸರು ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.
ಪಾದರಾಯನಪುರದಲ್ಲಿ 46 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಹರಡಲು ಕಾರಣ ಏನು ಎಂಬುದನ್ನ ತನಿಖೆ ನಡೆಸಲಾಗ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಪಾದರಾಯನಪುರದಲ್ಲಿ ಮೊದಲ ಸೋಂಕಿತ ಪೆ-167 ದೆಹಲಿಯ ತಬ್ಲಿಘಿ ಜಮಾತ್ಗೆ ಹೋಗಿ ಬಂದಿದ್ದು, ಆತನಿಂದ ಪೆ-168 ಕುಟುಂಬಸ್ಥರೊಬ್ಬರಿಗೆ ಸೋಂಕು ತಗುಲಿತ್ತು. ಹೀಗೆ ಶುರುವಾದ ಕೊರೊನಾ ಕೇಸ್ಗಳು ಇಂದು 46ಕ್ಕೆ ತಲುಪಿವೆ. ಹೀಗಾಗಿ ಪಾದಾರಯನಪುರದಲ್ಲಿ ಮೇ ಅಂತ್ಯದೊಳಗೆ ಸೋಂಕಿತರ ಸಂಖ್ಯೆ 100ರ ಗಡಿ ದಾಟುವ ಸಾಧ್ಯತೆ ಇದೆಯಂತೆ. ಹೀಗಾಗಿ ಪಾದರಾಯನಪುರದಲ್ಲಿ ಇಂದು ರ್‍ಯಾಂಡಮ್ ಟೆಸ್ಟ್ ನಡೆಸಲು ನಿರ್ಧಾರ ಮಾಡಿದ ಬಿಬಿಎಂಪಿ, ಪೊಲೀಸರ ಸಹಾಯ ಪಡೆದು ತಪಾಸಣೆ ಮುಂದುವರೆಸಿದೆ.
ಯಾಕಂದ್ರೆ ಈ ಹಿಂದೆ 20 ಕೇಸ್ ಬೆಳಕಿಗೆ ಬಂದ ಹಿನ್ನೆಲೆ, ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ಮಾಡಲು ತೆರಳಿದಾಗ ಬಿಬಿಎಂಪಿ ಹಾಗೂ ಆರೋಗ್ಯ ಅಧಿಕಾರಿಗಳ ಮೇಲೆ ಪಾದರಾಯನಪುರದ ಕಿಡಿಗೇಡಿಗಳು ಹಲ್ಲೆ ನಡೆಸಿದ್ರು. ಸದ್ಯ ಪಾದರಾಯನಪುರಕ್ಕೆ ಹೆಚ್ಚಿನ ಒತ್ತು ನೀಡಿದ ಆರೋಗ್ಯಾಧಿಕಾರಿಗಳು, ವಯೋ ವೃದ್ಧರು, ಮಹಿಳೆಯರು, ಮಕ್ಕಳಿಗೆ ಮೊದಲ ಆದ್ಯತೆ ನೀಡಿ ಶೀತ, ಕೆಮ್ಮು, ಜ್ವರ ಈ ಲಕ್ಷಣ ಕಂಡು ಬಂದಲ್ಲಿ ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ.